ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆಗೆಯುವ ಹಣಕೋಣ ಸಾತೇರಿ ದೇವಸ್ಥಾನ ಜಾತ್ರೆ ಸೆ.10 ರಿಂದ 16 ರವರೆಗೆ ಜರುಗಲಿದೆ. ರಾಜ್ಯ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಾಕಷ್ಟು ತಯಾರಿ ನಡೆಸಲಾಗಿದೆ.
ಸೆ.10 ರಂದು ರಾತ್ರಿ 12 ಗಂಟೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುಕೊಳ್ಳಲಿದೆ ಎಂಬುದು ಸ್ಥಳೀಯರ ನಂಬಿಕೆ. ಸೆ.11 ರಿಂದ ಪೂಜೆಗಳು ಪ್ರಾರಂಭವಾಗಲಿವೆ. ಅಂದು ಬೆಳಗ್ಗೆ ಗ್ರಾಮಸ್ಥರಿಂದ ನವೆ ಅರ್ಪಿಸುವುದು, ಸಾಯಂಕಾಲ ಕುಳಾಯಿ ಕುಟುಂಬಗಳ ನವ ವಧುಗಳಿಂದ ಹಾಗೂ ಕುಮಾರಿಯರಿಂದ ದೇವಿಗೆ ಅಡಕೆ ಅರ್ಪಿಸುವ ಕಾರ್ಯಗಳು ನಡೆಯಲಿವೆ.
ಸೆ.12 ರ ಬೆಳಗ್ಗೆ 8 ಗಂಟೆಯಿಂದ ಸೆ.16 ರ ಸಾಯಂಕಾಲ 5 ಗಂಟೆಯವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ, ಉಡಿ ತುಂಬಲು, ತುಲಾ ಭಾರ ಹಾಗೂ ಇತರ ಹರಕೆ ಅರ್ಪಿಸಲು ಅವಕಾಶವಿದೆ. ಸೆ.12 ರಿಂದ ದೇವಿಗೆ ಉಡಿ ತುಂಬಿದ ಸೀರೆಗಳನ್ನು ಹರಾಜು ಹಾಕಲಾಗುವುದು. ಸೆ.13 ರಿಂದ 16 ರವರೆಗೆ ಬೆಳಗ್ಗೆ 9 ರಿಂದ ಸಾಯಂಕಾಲ 4 ಗಂಟೆಯವರೆಗೆ ಅನ್ನ ಪ್ರಸಾದ ವಿತರಣೆ ಇರಲಿದೆ. ಸೆ.12 ರಿಂದ 15 ರವರೆಗೆ ಪ್ರತಿ ದಿನ ಸಾಯಂಕಾಲ ವಿವಿಧ ಭಕ್ತ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಇರಲಿದೆ. ದೇವಿ ಹಣಕೋಣದಲ್ಲಿ ನೆಲೆ ಊರಿದ ಕುರಿತು ಸಾಕಷ್ಟು ಕಥೆಗಳು ಸ್ಥಳೀಯರ ಬಾಯಲ್ಲಿವೆ. ಕಾರವಾರ ಗೋವಾ ಭಾಗದ ಜನ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ.