ಶ್ರೀಕಾಂತ ಅಕ್ಕಿ
ಬಳ್ಳಾರಿ: ಜೀವನದಲ್ಲಿ ಒಮ್ಮೆಯಾದರೂ ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಎಂಬ ಮಾತಿದೆ. ಆದರೆ, ಕರೊನಾ ದಿಂದ ಪ್ರವಾಸಿಗರಿಗೆ ಕಳೆದ 3ತಿಂಗಳಿಂದ ಹಂಪಿಯ ಸ್ಮಾರಕ ವೀಕ್ಷಿಸಲು ನಿರಾಸೆಯಾಗಿತ್ತು. ಸದ್ಯ ಆ ನಿರಾಸೆ ಇಂದಿನಿಂದ( ಜುಲೈ.೦೬) ದೂರವಾಗಲಿದ್ದು, ಪ್ರವಾಸಿಗರು ಹಂಪಿ ಸ್ಮಾರಕ ವೀಕ್ಷಣೆ ಮಾಡಬಹುದಾಗಿದೆ.
ಕರೊನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆಯೇ ವಿನಹ ಕಡಿಮೆಯಾಗುತ್ತಿಲ್ಲ.ಹೀಗಾಗಿ ಸರ್ಕಾರವೇ ಲಾಕ್ ಡೌನ್ ರಿಲೀಫ್ ಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಇತ್ತೀಚೆಗೆ ಅನುಕೂಲ ಕಲ್ಪಿಸಿದೆ.ಆದರೆ, ವಿಶ್ವ ಪಾರಂಪರಿಕ ತಾಣ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನಲೆ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದ್ದು, ಹಂಪಿ ಲಾಕ್ ಡೌನ್ ನಿಂದ ಮುಕ್ತಿ ಪಡೆದಂತಾಗಿದೆ. ಕರೊನಾ ಹಿನ್ನಲೆ ಮಾಚ್.23ರಂದು ಲಾಕ್ ಡೌನ್ ಘೋಷಿಸಿದ ಬಳಿಕ ಸತತ ಮೂರು ತಿಂಗಳ ಕಾಲ ಹಂಪಿ ನೋಡಲು ಯಾರಿಗೆ ಅವಕಾಶವಿರಲಿಲ್ಲ. ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಂಪಿಯೊಳಗೆ ಯಾರನ್ನು ಬಿಡದಂತೆ ಸೂಚನೆ ನೀಡಿತ್ತು. ಅದರನ್ವಯ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಇದುವರೆಗೂ ನಿರ್ಬಂಧ ವಿಧಿಸಿತ್ತು.ಸದ್ಯ ಸ್ಮಾರಕಗಳನ್ನು ನೋಡಲು ಅವಕಾಶ ಕಲ್ಪಿಸಿದೆ.
ಹಂಪಿಯ ಸೊಬಗು ನೋಡುವುದೇ ಒಂದು ಆನಂದ. ಒಂದು ಸುತ್ತು ಹೊಡೆದರೇ ವಿಜಯನಗರ ಗತವೈಭವ ಕಣ್ಣಿಗೆ ರಾಚುತ್ತದೆ.ಹೀಗಾಗಿ ಹಂಪಿ ನೋಡಬೇಕೆನ್ನುವವರ ಸಂಭ್ರಮ ಇಮ್ಮಡಿಸಿದೆ. ಇದಲ್ಲದೆ ಪುರಾತತ್ವ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಹಂಪಿಯೊಳಗೆ ಯಾರೇ ಕಾಲಿಟ್ಟರೂ ನೋಂದಣೆ ಮಾಡಿಕೊಳ್ಳಲಿದೆ.ಬರುವವರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು.ಸಾಮಾಜಿಕ ಅಂತರ ಕಾಪಾಡಬೇಕು.
ಮಾರ್ಗದರ್ಶಿಗಳಲ್ಲಿ ಸಂತಸ: ಪ್ರವಾಸಿಗರಿಗೆ ನಿರ್ಬಂಧ ವಿದಿಸಿದ್ದರಿಂದ ಹಂಪಿಯಲ್ಲಿದ್ದ 200 ಕ್ಕೂ ಹೆಚ್ಚು ಮಾರ್ಗದರ್ಶಿಗಳಿಗೆ ಜೀವನ ನಡೆಸಲು ತೀವ್ರ ತೊಂದರೆಯಾಗಿತ್ತು.ಹಲವರು ವಿಧಿಯಿಲ್ಲದೆ ನರೇಗಾ ಸೇರಿ ಇನ್ನಿತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಪ್ರವಾಸಿಗರಿಗೆ ಸ್ಮಾರಕ ನೋಡಲು ಅನುಕೂಲ ಕಲ್ಪಿಸಿರುವುದರಿಂದ ಮಾರ್ಗದರ್ಶಿಗಳಿಗೆ ಸಂತಸ ತಂದಿದೆ.
50ಲಕ್ಷ ಲಾಸ್: 2019ರ ಮಾರ್ಚ್, ಏಪ್ರಿಲ್, ಮೇ ವೇಳೆ ಹಂಪಿಗೆ 77.15 ಲಕ್ಷ ರೂ.ಆದಾಯ ಹರಿದು ಬಂದಿತ್ತು. ಅಲ್ಲದೆ 2019 ರ ಮಾರ್ಚ್ ನಲ್ಲಿ ಹಂಪಿ ಸ್ಮಾರಕಗಳಿಗೆ ದೇಶಿ 11,578 ಮತ್ತು 1475 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು.ಏಪ್ರಿಲ್ ನಲ್ಲಿ 11,129 ಮತ್ತು 459 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು.ಮೇ ತಿಂಗಳಲ್ಲಿ ದೇಶಿ 18035 ಮತ್ತು 312 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, 2020 ರ ಮಾರ್ಚ್ 23 ರಿಂದ ಕರೊನಾ ಹಿನ್ನಲೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡದ್ದರಿಂದ 50 ಲಕ್ಷ ರೂ.ಗೂ ಹೆಚ್ಚಿನ ಆದಾಯ ಖೋತಾ ಆಗಿದೆ. ಇದೀಗ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಿದ್ದು, ಇನ್ನಾದರೂ ಆದಾಯ ಹರಿದು ಬರುವುದೇ ಎಂಬುದನ್ನು ಕಾದು ನೋಡಬೇಕಿದೆ.