More

    ಡಿಫೆನ್ಸ್​ ಸ್ಟ್ಯಾಂಡಿಂಗ್ ಕಮಿಟಿಯ 11 ಸಭೆಗಳಿಗೆ ಹಾಜರಾಗಿಲ್ಲ ರಾಹುಲ್ ಗಾಂಧಿ: ಆದರೂ ಸೇನೆಯನ್ನು ಟೀಕಿಸ್ತಿದ್ದಾರೆ!

    ನವದೆಹಲಿ: ಸೇನೆಯ ನೈತಿಕ ಸ್ಥೈರ್ಯ ಕುಗ್ಗಿಸುವಂತಹ, ದೇಶದ ಘನತೆಯನ್ನು ತಗ್ಗಿಸುವಂತಹ ಹೇಳಿಕೆಗಳ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನ ಡಿಫೆನ್ಸ್ ಸ್ಟ್ಯಾಂಡಿಂಗ್ ಕಮಿಟಿಯ 11 ಸಭೆಗಳಿಗೆ ನಿರಂತರವಾಗಿ ಹಾಜರಾಗಿಲ್ಲ!

    ಹೀಗೊಂದು ವರದಿ ಎಲ್ಲರ ಗಮನಸೆಳೆದಿದೆ. ಕಳೆದ ವರ್ಷ 17ನೇ ಲೋಕಸಭೆ ರಚನೆ ಆದಾಗ ಡಿಫೆನ್ಸ್​ ಸ್ಟ್ಯಾಂಡಿಂಗ್ ಕಮಿಟಿ ಕೂಡ ರಚನೆಯಾಗಿತ್ತು. ರಾಹುಲ್ ಗಾಂಧಿ ಅದರ ಸದಸ್ಯರಾಗಿದ್ದು, 2019ರ ಸೆಪ್ಟೆಂಬರ್​ ತಿಂಗಳಿಂದ 2020ರ ಮಾರ್ಚ್​ 12ರ ತನಕ ನಡೆದ 11 ಸಭೆಗಳಲ್ಲಿ ಒಮ್ಮೆಯೂ ಹಾಜರಿರಲಿಲ್ಲ!. ಮಾರ್ಚ್ 12ಕ್ಕೆ ಕೊನೇ ಸಭೆ ನಡೆದಿತ್ತು ಎಂಬ ಅಂಶವನ್ನು ಲೋಕಸಭೆಯ ವೆಬ್​ಸೈಟ್​ ಮಾಹಿತಿ ಬಹಿರಂಗಪಡಿಸಿದೆ.

    ಡಿಫೆನ್ಸ್ ಸ್ಟ್ಯಾಂಡಿಂಗ್ ಕಮಿಟಿಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಈ ಪೈಕಿ 21 ಸದಸ್ಯರು ಲೋಕಸಭೆಯವರು. ಇವರನ್ನು ಲೋಕಸಭೆ ಸ್ಪೀಕರ್ ನಾಮನಿರ್ದೇಶನ ಮಾಡುತ್ತಾರೆ. ಇನ್ನು 10 ಸದಸ್ಯರು ರಾಜ್ಯಸಭೆಯವರು. ಅವರನ್ನು ರಾಜ್ಯಸಭೆಯ ಚೇರ್​ಮನ್ ನಾಮನಿರ್ದೇಶನ ಮಾಡುತ್ತಾರೆ. ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು, ರಸೀದಿಗಳನ್ನು ಪರಿಶೀಲಿಸುವ ಮತ್ತು ಸಂಸತ್ತಿನ ಪ್ರಾಮುಖ್ಯತೆ ಹೊಂದಿರುವ ರಕ್ಷಣಾ ಸಂಬಂಧಿ ವಿಷಯಗಳ ಪರಿಶೀಲನೆಯನ್ನು ಈ ಸಮಿತಿ ಮಾಡುತ್ತದೆ. ಈ ಸಮಿತಿ ಸದಸ್ಯರ ಸದಸ್ಯತ್ವದ ಅವಧಿ ಒಂದು ವರ್ಷಕ್ಕಿಂತ ಹೆಚ್ಚು ಇರುವುದಿಲ್ಲ.

    ಬಿಜೆಪಿ ಸಂಸದ ಜುವಲ್​ ಓರಮ್ ಈ ಸಮಿತಿಯ ಚೇರಮನ್​ ಆಗಿದ್ದು, ರಾಹುಲ್ ಗಾಂಧಿಯವರ ಅನುಪಸ್ಥಿತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ, ರಾಹುಲ್ ಗಾಂಧಿ ರಕ್ಷಣೆಗೆ ನಿಂತ ಕಾಂಗ್ರೆಸ್ ನಾಯಕರು, ಚೀನಾ ಗಡಿ ವಿಚಾರಕ್ಕೂ ರಾಹುಲ್ ಗಾಂಧಿ ಗೈರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದರು.

    ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ ಟ್ವೀಟ್ ಮಾಡಿದ್ದು, ಡಿಫೆನ್ಸ್​ಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಾಗಿದ್ದರೂ ಅದಕ್ಕೆ ಸಂಬಂಧಿಸಿದ ಒಂದೇ ಒಂದು ಸಭೆಗೂ ರಾಹುಲ್ ಗಾಂಧಿ ಹಾಜರಾಗಿಲ್ಲ. ಆದರೂ, ಅವರು ಸಶಸ್ತ್ರ ಪಡೆಗಳ ಮೇಲೆ ಸಂದೇಹಿಸುವಂತೆ ಹೇಳಿಕೆ ನೀಡುವುದು ಮತ್ತು ಪ್ರತಿಯೊಂದಕ್ಕೂ ದೇಶದ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಹೇಳಿಕೆಗಳನ್ನು ನೀಡುತ್ತಿರುವುದು ಖೇದಕರ. ಹೊಣೆಗಾರಿಕೆಯುಳ್ಳ ವಿಪಕ್ಷ ನಾಯಕರು ಮಾಡಬಾರದ ಕೆಲಸಗಳನ್ನೆಲ್ಲವನ್ನೂ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅವರು ತಮ್ಮ ಕುಟುಂಬ ರಾಜಕಾರಣದ ಸಂಪ್ರದಾಯವನ್ನು ವೈಭವೀಕರಿಸುತ್ತಿದ್ದು, ಅಲ್ಲಿ ಡಿಫೆನ್ಸ್​ ಮತ್ತು ಇಂತಹ ಸ್ಥಾಯಿ ಸಮಿತಿ ವಿಚಾರಗಳೆಲ್ಲವೂ ನಗಣ್ಯವಾಗಿರುತ್ತದೆ. ಕಮಿಷನ್​ ಲೆಕ್ಕಾಚಾರಗಳಷ್ಟೇ ಪ್ರಾಮುಖ್ಯತೆ ಪಡೆಯುತ್ತವೆ. ಸಂಸದೀಯ ವ್ಯವಹಾರಗಳನ್ನು ಅರ್ಥಮಾಡಿಕೊಂಡಿರುವ ಅನೇಕ ಸಂಸದೀಯ ಪಟುಗಳು ಕಾಂಗ್ರೆಸ್ಸಿನಲ್ಲಿದ್ದಾರೆ. ಅವರನ್ನೆಲ್ಲ ಬಿಟ್ಟು ಇಂತಹ ಸನ್ನಿವೇಶ ತಂದುಕೊಂಡಿರುವ ಕಾಂಗ್ರೆಸ್​ ಬಗ್ಗೆ ನಿಜವಾಗಿಯೂ ಖೇದವಿದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಮೇಕಪ್ ಕಲಾವಿದೆಗೆ ಮೋಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts