ಜಿಲ್ಲೆ

ಭೂಮಾಲೀಕರ ಪಿತೂರಿಯಿಂದ ಹಮೀದ್‌ಗೆ ದೌರ್ಜನ್ಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಭೂಸುಧಾರಣಾ ಹೋರಾಟದ ಸಂದರ್ಭ ಭೂ ಮಾಲೀಕರೊಬ್ಬರು ನಾಪತ್ತೆಯಾದಾಗ ಇತರ ಭೂಮಾಲೀಕರ ಪಿತೂರಿಯಿಂದ ಹಮೀದ್ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದರು. ಆದರೆ ಭೂಮಾಲೀಕ ಪತ್ತೆಯಾದಾಗ ಪೊಲೀಸರು ತಮ್ಮ ತಪ್ಪನ್ನು ಅರಿತು ಕ್ಷಮೆ ಯಾಚಿಸಿದ್ದರು ಎಂದು ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯ ರುಕ್ಮಯ ತೊಕ್ಕೊಟ್ಟು ಹೇಳಿದರು.

ಹರೇಕಳ ಡಿವೈಎಫ್‌ಐ ಕಚೇರಿಯಲ್ಲಿ ಮಂಗಳವಾರ ಸಿಪಿಐಎಂ ಹಿರಿಯ ನೇತಾರ ದಿ.ಕೆ.ಎಚ್.ಹಮೀದ್ ಹರೇಕಳ ಅವರಿಗೆ ನಡೆದ ಶ್ರದ್ಧಾಂಜಲಿ ಸಭೆ, ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.

ಭೂಸುಧಾರಣೆ ಮಸೂದೆ ಹೋರಾಟದಲ್ಲಿ ಭಾಗವಹಿಸಿದ ಮಂದಿಯಲ್ಲಿ ಹಮೀದ್ ಒಬ್ಬರಾಗಿದ್ದರು. ಅದೆಷ್ಟೋ ಮಂದಿ ನಿಧನರಾಗುತ್ತಾರೆ, ಆದರೆ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಹಮೀದ್ ಅವರಿಗೆ ಇಷ್ಟೊಂದು ದೊಡ್ಡಮಟ್ಟದ ಗೌರವ ಸಿಗುವುದಾದರೆ ಅವರ ಕೆಲಸ ಕಾರಣ ಎಂದು ಅಭಿಪ್ರಾಯಪಟ್ಟರು.

ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ಹಮೀದ್ ಪಕ್ಷ, ಕಾರ್ಯಕರ್ತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹರೇಕಳದಲ್ಲಿ ಡಿವೈಎಫ್‌ಐ ಕಚೇರಿ ನಿರ್ಮಾಣ, ನವೀಕರಣ ಸಂದರ್ಭ ಅವರು ಪಟ್ಟ ಶ್ರಮ ಅಪಾರ. ಅವರ ಆಶಯ ಈಡೇರಿಸಿದಾಗ ಮಾತ್ರ ನೈಜ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.

ಯು.ಬಿ.ನಾರಾಯಣ ಮಾತನಾಡಿದರು. ಪಾವೂರು ಗ್ರಾಪಂ ಮಾಜಿ ಉಪಾಧ್ಯಕ್ಷ ದುಗ್ಗಪ್ಪ ಪೂಜಾರಿ ಪಾವೂರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ಕಾರ್ಮಿಕ ಮುಖಂಡ ಯಾದವ ಶೆಟ್ಟಿ, ಹರೇಕಳ ಗ್ರಾಪಂ ಸದಸ್ಯ ಅಬ್ದುಲ್ ಸತ್ತಾರ್ ನ್ಯೂಪಡ್ಪು, ಪ್ರಮುಖರಾದ ರಮೇಶ್, ಜೀವನ್ ರಾಜ್ ಕುತ್ತಾರ್, ನಿತಿನ್ ಕುತ್ತಾರ್, ಸುನೀಲ್ ತೇವುಲ, ರಝಾಕ್ ಮೊಂಟೆಪದವು ಮೊದಲಾದವರು ಭಾಗವಹಿಸಿದ್ದರು. ರಿಝ್ವನ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.