ಹೂವಿನಹಡಗಲಿ: ತಾಲೂಕಿನ ಹಗರನೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ್ದು ಎನ್ನಲಾದ ಅಪ್ರಕಟಿತ ತುರುಗೋಳ್ ವೀರಗಲ್ಲುಗಳು ಪತ್ತೆಯಾಗಿವೆ. ಇವುಗಳನ್ನು ಕನ್ನಡ ವಿವಿ ಶಾಸನಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಡಿ.ವೀರೇಶ ಶೋಧನೆ ಮಾಡಿದ್ದಾರೆ.
ತುರುಗೋಳ್ ವೀರಗಲ್ಲು ಮೂರು ಹಂತದಲ್ಲಿದ್ದು, ಅದು ಎರಡು ತುಂಡುಗಳಾಗಿವೆ. ಮೊದಲ ಭಾಗದ ಕೆಳಗೆ ಹೋರಾಟದಲ್ಲಿ ವೈರಿಯೊಂದಿಗೆ ವೀರನು ಸೆಣಸುತ್ತಿರುವುದು ಮತ್ತು ಅವನ್ನೊಂದಿಗೆ 4 ಎತ್ತುಗಳಿವೆ. ಅಲ್ಲದೆ ವೀರನ ಮರಣಪೂರ್ವ ಹುಲಿಗಳೊಂದಿಗೆ ಹೋರಾಡಿ ವಿಜಯಶಾಲಿಯಾದ ಬಳಿಕ ಬಲಗೈಯಲ್ಲಿರುವ ಬಾಕುವನ್ನು ಮತ್ತೊಂದು ಹುಲಿ ಮೂತಿಗೆ ಇರಿದಂತೆ ಕಾಣುತ್ತದೆ.
ಒಂದೇ ಹಂತದಲ್ಲಿ ಎರಡು ಘಟನೆಗಳು ಕಾಣುವಂತೆ ಶಿಲ್ಪವನ್ನು ಕೆತ್ತಿರುವುದು ಅಪರೂಪ. ಎರಡನೇ ಹಂತದಲ್ಲಿ ಇಬ್ಬರು ಅಪ್ಸರೆಯರು ಮಡಿದ ವೀರನನ್ನು ಸ್ವರ್ಗಲೋಕಕ್ಕೆ ಒಯ್ಯುತ್ತಿರುವಂತೆ ಭಾಸವಾಗುತ್ತದೆ. ಮೊದಲ ಬಾರಿಗೆ ತುರುಗೋಳ್ ಯುದ್ಧದ ಜತೆಗೆ ವೀರನ ಮರಣ ಪೂರ್ವದ ಪರಾಕ್ರಮವನ್ನು ಕೆತ್ತಿರುವುದು ಕರ್ನಾಟಕದಲ್ಲಿಯೇ ಮೊದಲು ಎಂದು ಹೇಳಬಹುದು.
ಇದನ್ನೂ ಓದಿ: ಎಮ್ಮೆಯ ಶಿಲ್ಪಗಳಿರುವ ತುರುಗೋಳ್ ವೀರಗಲ್ಲು ಪತ್ತೆ
ಮತ್ತೊಂದು ಸ್ಮಾರಕ ಸುಮಾರು 11 ಅಥವಾ 12ನೇ ಶತಮಾನದ ಬಗ್ಗೆ ತಿಳಿಸುತ್ತದೆ. ತುರುಗೋಳ್ ವೀರಗಲ್ಲು 3 ಹಂತಗಳನ್ನು ಒಳಗೊಂಡಿದೆ. ಮೊದಲ ಪಟ್ಟಿಕೆಯಲ್ಲಿ ವೀರನು ಕಳ್ಳರೊಂದಿಗೆ ಕಾದಾಡಿ ಬಿಡಿಸಿಕೊಂಡ ದೃಶ್ಯವಿದೆ. ಎರಡನೇ ಹಂತದಲ್ಲಿ ಮಡಿದ ವೀರನನ್ನು ಚಾಮರಧಾರೆಯ ಇಬ್ಬರು ಸುರಂಗನಾರೆಯರು ಮಂಟಪದಲ್ಲಿ ಕೂರಿಸಿಕೊಂಡು ಸ್ವರ್ಗ ಪ್ರಯಾಣ ಮಾಡುತ್ತಿರುವಂತಿದೆ. ಕಲ್ಯಾಣಿ ಚಾಲುಕ್ಯರ ಅವಧಿಯ ತುರುಗೋಳ್ ಹಾಗೂ ಹುಲಿಬೇಟೆ ಸ್ಮಾರಕ ಶಿಲ್ಪವು 3 ಹಂತಗಳನ್ನು ಒಳಗೊಂಡಿದ್ದು, ಬಳಪದ ಶಿಲೆಯಲ್ಲಿ ಕಂಡರಿಸಲಾಗಿದೆ.
ಒಂದೇ ಬಾರಿಗೆ ಮೂರು ಬಾಣಗಳನ್ನು ಬಿಲ್ಲಿಗೆ ಹೂಡಿ ಪ್ರಯೋಗಿಸುವ ಕಲೆಯಲ್ಲಿ ವೀರನು ನುರಿತನಾಗಿದ್ದನ್ನು ಇಲ್ಲಿ ಕಾಣಬಹುದು. ಕೊನೆಯ ಹಂತದಲ್ಲಿ ಮಡಿದ ವೀರನು ಕೈ ಮುಗಿದು ಸ್ವರ್ಗದಲ್ಲಿ ಕುಳಿತಿರುವನು. ಯತಿಯು ಎಡಗೈಯಲ್ಲಿ ಆರತಿ, ಬಲಗೈಯಲ್ಲಿ ಘಂಟೆ ಹಿಡಿದು ಶಿವಲಿಂಗದ ಮುಂದೆ ನಿಂತಿರುವುದನ್ನು ಇಲ್ಲಿ ಕಾಣಬಹುದು ಎನ್ನುತ್ತಾರೆ ಸಂಶೋಧನಾರ್ಥಿ ವೀರೇಶ.