More

    ಎಮ್ಮೆಯ ಶಿಲ್ಪಗಳಿರುವ ತುರುಗೋಳ್ ವೀರಗಲ್ಲು ಪತ್ತೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಮ್ಮೆಯ ಶಿಲ್ಪಗಳಿರುವ ತುರುಗೋಳ್ ವೀರಗಲ್ಲು ಶಿವಮೊಗ್ಗ ತಾಲೂಕು ಗುಡ್ಡದ ಅರಕೆರೆ ಗ್ರಾಮದ ಯಶೋದಮ್ಮ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದೆ.

    ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪೂರ್ಣಿಮಾ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ 10ನೇ ಶತಮಾನದ ರಾಷ್ಟ್ರಕೂಟರ ಆಳ್ವಿಕೆಯ ಕನ್ನರದೇವನ ಕಾಲದ ತುರುಗೊಳು ವೀರಗಲ್ಲಿನಲ್ಲಿ ವಿಶೇಷವಾಗಿ ಎಮ್ಮೆ ಶಿಲ್ಪಗಳು ಕಂಡುಬಂದಿವೆ.

    ರಾಜ್ಯದಲ್ಲಿ ಇದುವರೆಗೆ ಎಮ್ಮೆಯ ಶಿಲ್ಪಗಳಿರುವ ಮೂರು ವೀರಗಲ್ಲುಗಳು ಕಂಡುಬಂದಿವೆ. ಹೆಚ್ಚಿನದಾಗಿ ಎಲ್ಲ ತುರುಗೋಳು ವೀರಗಲ್ಲಿನಲ್ಲಿ ಹಸುಗಳನ್ನೇ ಚಿತ್ರಿಸಲಾಗುತ್ತದೆ. ಶಿವಮೊಗ್ಗ ತಾಲೂಕಿನಲ್ಲಿ ಪತ್ತೆಯಾದ ವೀರಗಲ್ಲು 262 ಸೆಂಮೀ ಉದ್ದ ಹಾಗೂ 95 ಸೆಂಮೀ ಅಗಲವಾಗಿದೆ ಎಂದು ಆರ್.ಶೇಜೇಶ್ವರ್ ತಿಳಿಸಿದ್ದಾರೆ.

    ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ವೀರನಾದ ಅರಿಗೆರೆಯ ನಾಡಗಾವುಂಡನ ತಮ್ಮ ಬೆಟ್ಟುಗನ ಹಿಂದೆ ಐದು ಎಮ್ಮೆಗಳ ಶಿಲ್ಪಗಳಿದ್ದು ಈ ವೀರನು ಬಿಲ್ಲು ಬಾಣಗಳನ್ನು ಹಿಡಿದು ಆರು ಜನ ಶತ್ರುಗಳ ವಿರುದ್ಧ ಹೋರಾಡುತ್ತಿರುವುದು ಕಂಡುಬರುತ್ತದೆ. ಎರಡನೇ ಪಟ್ಟಿಕೆಯಲ್ಲಿ ವೀರನಾದ ಬೆಟ್ಟುಗನು ಮರಣ ಹೊಂದಿದ್ದು ಇವನನ್ನು ಆಪ್ಸರೆಯರು ಸಂಗೀತ ವಾದ್ಯಗಳೊಂದಿಗೆ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದನ್ನು ಚಿತ್ರಿಸಲಾಗಿದೆ.

    ತುರುಗೋಳು ಎಂದರೆ ಹಸುಗಳು, ಎತ್ತುಗಳು ಹಾಗೂ ಎಮ್ಮೆಗಳು. ಗೋವುಗಳು ಅಂದಿನ ಕಾಲದ ರಾಜ್ಯದ ಅರ್ಥಿಕ ಸಂಪತ್ತಿನ ಪ್ರತೀಕವಾಗಿದ್ದವು. ಹೀಗಾಗಿ ಶತ್ರುಗಳು ಗೋವುಗಳನ್ನು, ಎಮ್ಮೆಗಳನ್ನು ಕಳ್ಳತನ ಮಾಡುವುದು, ಯುದ್ಧ ಸಾರುವುದು ಸಾಮಾನ್ಯವಾಗಿತ್ತು. ಹೀಗಾಗಿ ಗುಡ್ಡದ ಅರಕೆರೆ ಗ್ರಾಮದಲ್ಲಿ ವಿಶೇಷವಾಗಿ ಎಮ್ಮೆಗಳ ಕಳ್ಳತನ ಮಾಡುವಾಗ ಶತ್ರುಗಳ ವಿರುದ್ಧ ಬೆಟ್ಟುಗ ಹೋರಾಡಿ ಮರಣಿಸಿದಾಗ ಗೋವಿಂದ ಗಾವುಂಡನು ಈ ತುರುಗೋಳು ವೀರಗಲ್ಲನ್ನು ನಿಲ್ಲಿಸಿರುವುದು ಶಾಸನದಿಂದ ತಿಳಿಯುತ್ತದೆ ಎಂದು ಶೇಜೇಶ್ವರ್ ವಿವರಿಸಿದ್ದಾರೆ.

    ಈ ಕ್ಷೇತ್ರ ಕಾರ್ಯದಲ್ಲಿ ಇತಿಹಾಸ ತಜ್ಞರಾದ ಡಾ. ಜಗದೀಶ, ಡಾ.ಶೇಷ ಶಾಸ್ತ್ರಿ, ಡಾ.ಪರಶಿವಮೂರ್ತಿ, ರಮೇಶ ಹಿರೇಜಂಬೂರು, ಮುರುಳಿಕೃಷ್ಣ ಹಾಗೂ ಗ್ರಾಮಸ್ಥರಾದ ಬಾಬಣ್ಣ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts