ಬೆಂಗಳೂರು: ಜಿಮ್ಗೆ ಬರುತ್ತಿದ್ದ ಟ್ರೇನರ್ ಮಾರ್ಗಮಧ್ಯೆಯೇ ಹೆಣವಾಗಿದ್ದು, ದುಷ್ಕರ್ಮಿಗಳು ಆತನನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೊದಲು ವಾಹನವೊಂದರಿಂದ ಬೈಕ್ಗೆ ಡಿಕ್ಕಿ ಹೊಡೆಸಿ, ಆತನನ್ನು ಬೀಳಿಸಿ, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಸನ್ನಿವೇಶದಿಂದ ಕಂಡುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈರಾಪುರ ಗ್ರಾಮದ ನಿವಾಸಿ ಶಿವಕುಮಾರ್ ಅಲಿಯಾಸ್ ಜಿಮ್ ಶಿವು (28) ಕೊಲೆಗೀಡಾದ ವ್ಯಕ್ತಿ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಶಿವು ಕಳೆದ 12 ವರ್ಷಗಳಿಂದ ಜಿಮ್ ತರಬೇತುದಾರನಾಗಿದ್ದು, ಸದ್ಯ ವಿಜಯಪುರದ ಸಂಗಮೇಶ್ವರ ಟಾಕೀಸ್ ಬಳಿಯ ಪವರ್ಹೌಸ್ ಜಿಮ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇಂದು ಬೆಳಗಿನ ಜಾವ ಬೈರಾಪುರ ಗ್ರಾಮದಿಂದ ಹೊರಟ ಶಿವು ಬೆಳಗ್ಗೆ 5.30ರ ಸುಮಾರಿಗೆ 2 ಕಿಲೋಮೀಟರ್ ದೂರದ ವಿಜಯಪುರ ಸಮೀಪದ ತೋಟದ ರಸ್ತೆ ಬದಿಯಲ್ಲಿ ಕೊಲೆಗೀಡಾಗಿದ್ದಾರೆ. ಹಿಂಬಾಲಿಸುತ್ತಿದ್ದ ದುಷ್ಕರ್ಮಿಗಳು ದಾರಿ ಮಧ್ಯೆ ಶಿವು ಬೈಕ್ಗೆ ಬೇರೊಂದು ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಚಾಕುವಿನಿಂದ ಇರಿದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ವಾಹನದ ನಂಬರ್ ಪ್ಲೇಟ್ ಸ್ಥಳದಲ್ಲಿ ಪತ್ತೆಯಾಗಿದ್ದು, ಶವವನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.