ಜಿಲ್ಲೆ

ರಾಜ್ಯ ಹೆದ್ದಾರಿಯಲ್ಲಿ ಮರಣಗುಂಡಿಗಳು : ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ಸ್ಥಿತಿ ಶೋಚನೀಯ : ಅಧಿಕಾರಿಗಳು ಡೋಂಟ್‌ಕೇರ್

ಸೌಮ್ಯ ಆರ್

ಮನೋಹರ ಬಳಂಜ ಬೆಳ್ತಂಗಡಿ

ಗುರುವಾಯನಕೆರೆ-ಉಪ್ಪಿನಂಗಡಿ ತೀರಾ ಹದಗೆಟ್ಟ ತಾಲೂಕಿನ ರಸ್ತೆಗಳಲ್ಲಿ ಒಂದಾಗಿದೆ. ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳು ಪ್ರಯಾಣಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಗುರುವಾಯನಕೆರೆಯಿಂದ ಕುಪ್ಪೆಟ್ಟಿ (ಉರುವಾಲು) ತನಕ ಅಂದಾಜು 13 ಕಿ.ಮೀ.ದೂರದ ರಸ್ತೆಯುದ್ದಕ್ಕೂ ಬೃಹತ್ತಾದ 50ಕ್ಕೂ ಹೆಚ್ಚಿನ ಗುಂಡಿಗಳಿವೆ. ರಸ್ತೆಯ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು, ತಲೆಗೆ ಗಂಭೀರ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ 50ಕ್ಕೂ ಹೆಚ್ಚು ಘಟನೆಗಳು ಈ ಮಳೆಗಾಲದಲ್ಲಿ ಸಂಭವಿಸಿವೆ.

ಗುರುವಾಯನಕೆರೆ-ಉಪ್ಪಿನಂಗಡಿ ಮೂಲಕ ಅವಳಿ ತಾಲೂಕು ಪಟ್ಟಣಗಳನ್ನು ಬೆಸೆಯುವ ರಾಜ್ಯ ಹೆದ್ದಾರಿ ಇದು. ಮಳೆಗಾಲದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿಯುವ ಪರಿಸ್ಥಿತಿಯಿಂದ ರಸ್ತೆ ಗುಂಡಿ ಸೃಷ್ಟಿ ಆಗುತ್ತಿದೆ. ಸಾವಿರಾರು ವಾಹನಗಳು ಓಡಾಡುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಸವಾರರ ಸಂಕಟ ಮೂಕರೋದನವಾಗಿದೆ.

ಈ ಹೆದ್ದಾರಿಗೆ ಗ್ರಾಮೀಣ ಭಾಗದಿಂದಲೂ ರಸ್ತೆ ಸಂಪರ್ಕವಿದೆ. ಹಿಂದಿನ ಸರ್ಕಾರ ಹಾಗೂ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಈ ಅವಧಿಯಲ್ಲಿ ರಸ್ತೆಗೆ ಮರುಡಾಂಬರೀಕರಣ, ಚರಂಡಿ ರಿಪೇರಿ ಕಾಮಗಾರಿ ಕಾಣದ ಕಾರಣ ರಸ್ತೆಯ ಸ್ಥಿತಿ ಅಧೋಗತಿಯಾಗಿದೆ. ಹೊಂಡ-ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವ ಸ್ಥಿತಿಯಿದ್ದು, ಪ್ರಯಾಣಿಕರಿಗೆ ಪ್ರಾಣ ಸಂಕಟ ಎದುರಾಗಿದೆ.

ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಸೇರಿರುವ ರಸ್ತೆ ಇದು. 20 ಕಿ.ಮೀ.ರಸ್ತೆಯಲ್ಲಿ ಸರಿಯಾಗಿರುವ ಭಾಗ ಕಾಣಲು ಸಿಗುತ್ತಿಲ್ಲ. 13 ಕಿ.ಮೀ.ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಗುರುವಾಯನಕೆರೆ ಪೇಟೆಯಿಂದ ಆರಂಭಗೊಂಡು 1.ಕಿ.ಮೀ. ದೂರದವರೆಗಿನ ಪಣೆಜಾಲು ತನಕವೇ ರಸ್ತೆಯಲ್ಲಿ ಹತ್ತಾರು ಬೃಹತ್ ಗುಂಡಿಗಳಿವೆ. ಇಡ್ಯರೇಷ್ಮೆ ರೋಡ್, ಗೇರುಕಟ್ಟೆ, ಪರಪ್ಪು, ನಾಳ, ಜಾರಿಗೈಲು, ಗೋವಿಂದೂರು, ಯಂತ್ರಡ್ಕ, ಮಾವಿನಕಟ್ಟೆ, ಹಲೇಜಿ ಮತ್ತು ಕುಪ್ಪೆಟ್ಟಿ ಪೇಟೆಯ ಮುಖ್ಯ ಭಾಗದಲ್ಲಿರುವ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಲು ಹೋಗಿ ದಿನಂಪ್ರತಿ ಒಂದೆರಡು ದ್ವಿಚಕ್ರ ವಾಹನ, ದೊಡ್ಡ ವಾಹನಗಳು ಅಪಘಾತ ಆಗುತ್ತಲ್ಲೇ ಇವೆ. ಇತ್ತೀಚೆಗೆ ಚರಂಡಿ ರಿಪೇರಿ ಕಾಮಗಾರಿ ಪ್ರಾರಂಭಿಸಿದರೂ ಕೆಲಸ ಅರ್ಧಕ್ಕೆ ನಿಲ್ಲಿಸಿ ಬಿಟ್ಟು ಹೋಗಿದ್ದಾರೆ. ಹಸಿ ಮಣ್ಣನ್ನು ರಸ್ತೆಯ ಪಕ್ಕದಲ್ಲಿ ಹಾಕಿದ ಪರಿಣಾಮ ಮಳೆಗೆ ಹರಿದು ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿ ಸಂಚಾರವೇ ಸವಾಲಾಗಿ ಪರಿಣಮಿಸಿದೆ.

ಯಂತ್ರಡ್ಕ ಸಮೀಪದಲ್ಲಿರುವ ಗುಂಡಿಗಳಿಂದ ಕೂಡಿದ ಕಿರಿದಾದ ತಿರುಗುವ ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ವಾಹನ ಚರಂಡಿ ಬಿದ್ದ ವಘಡ ಇತ್ತೀಚೆಗೆ ನಡೆಯಿತು. ಈ ಭಾಗದಲ್ಲಿ ರಸ್ತೆ ಇನ್ನಷ್ಟು ಕುಸಿದು ಬೀಳುವ ಅಪಾಯವಿದ್ದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ರೀತಿಯ ಸೂಚನೆ ಫಲಕ ಅಥವಾ ಅಪಾಯ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ವಿಚಿತ್ರವಾಗಿದೆ. ಸ್ಥಳೀಯ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ನಿಯಮಮ ಪಾಲಿಸದೆ ರಸ್ತೆಯ ಪಕ್ಕದಲ್ಲಿ ಮನೆ, ಅಂಗಡಿ ಹಾಗೂ ವಸತಿ ಕಟ್ಟಡದ ನಿರ್ಮಾಣದ ಮಾಡುತ್ತಾರೆ. ಈ ಸಮಯದಲ್ಲಿ ರಸ್ತೆಯ ಚರಂಡಿ ಮುಚ್ಚುತ್ತಾರೆ. ಕೆಲವೊಂದು ಕಡೆ ಸಣ್ಣ ಗಾತ್ರದ ಮೋರಿ ಅಳವಡಿಸಿಕೊಂಡು ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾದೆ ರಸ್ತೆ ಗುಂಡಿ ನಿರ್ಮಾಣವಾಗಲು ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಗುಂಡಿಗಳಿಗೆ ದೊಡ್ಡ ಗಾತ್ರದ ಕಲ್ಲುಗಳನ್ನು, ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಹಾಳಾದ ಸಿಮೆಂಟು, ಟೈಲ್ಸ್ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಾರೆ. ಇದರಿಂದ ಜೋರಾಗಿ ಮಳೆ ನೀರು ಹರಿಯುವಾಗ ವಾಹನ ಸವಾರರ ಗಮನಕ್ಕೆ ಬಾರದೆ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತದೆ.

20 ಕಿ.ಮೀ.ದೂರದ ಹೆಚ್ಚಿನ ಭಾಗದಲ್ಲಿ ಡಾಂಬರು ಎದ್ದು ಹೋಗಿ ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿವೆ. ಚರಂಡಿಯಲ್ಲಿ ಹೂಳು ತುಂಬಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಕೊಂಡು ವಾಹನ ಚಲಾಯಿಸಬೇಕಾಗಿದೆ. ಸಂಪೂರ್ಣ ಹಾಳಾಗಿರುವ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು. ರಮೇಶ್ ವಾಹನ ಚಾಲಕ