ಗುರುಗುಂಟಾದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 (ಎ)ದುಸ್ಥಿತಿ. ಗುರುಗುಂಟಾದಲ್ಲಿ ಚರಂಡಿ ತ್ಯಾಜ್ಯ ಹೆದ್ದಾರಿಗೆ ಹರಿಯುತ್ತಿರುವುದು.  
ಜಿಲ್ಲೆ

ದುಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಸಂಚಾರಕ್ಕೆ ತೊಂದರೆ

ಗುರುಗುಂಟಾ: ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 (ಎ) ರಲ್ಲಿ ಸಂಚರಿಸುವುದು ಸಾಹಸದ ಕೆಲಸ ಎನ್ನುವಂತಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು, ಸವಾರರು ಪ್ರಯಾಣ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಮಳೆ ಬಂದಾಗ ರಸ್ತೆ ಗುಂಡಿಗಳಲ್ಲಿ ನೀರು ನಿಲ್ಲುತ್ತಿದೆ. ಗ್ರಾಮದ ಚರಂಡಿ ತ್ಯಾಜ್ಯವೂ ಗುಂಡಿ ಸೇರುತ್ತಿದೆ. ಹೆದ್ದಾರಿಯನ್ನು ಸುಸ್ಥಿತಿಯಲ್ಲಿಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದಾಗಿ ಒಂದು ವರ್ಷದಿಂದ ಗುಂಡಿಗಳ ಸ್ಥಿತಿ ಬದಲಾಗಿಲ್ಲ.

ಹೆಚ್ಚಿನ ಗುಂಡಿಗಳಿಂದಾಗಿ ವಾಹನಗಳು ದುರಸ್ತಿಗೆ ಬರುತ್ತಿವೆ. ರಸ್ತೆ ದುರಸ್ತಿ ಮಾಡಿಸುವ ಮೂಲಕ ವಾಹನ ದುರಸ್ತಿ ತಡೆಯಬೇಕೆಂಬುದು ವಾಹನಗಳ ಚಾಲಕರ ಒತ್ತಾಯವಾಗಿದೆ. ಗುಂಡಿಗಳಿಂದಾಗಿ ಅಪಘಾತಗಳೂ ಸಂಭವಿಸುತ್ತಿವೆ.

ಜೇವರ್ಗಿ-ಚಾಮರಾಜನಗರ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರೋಗಿಗಳನ್ನು ತುರ್ತು ಕರೆದೊಯ್ಯಬೇಕಾದ ಆಂಬುಲೆನ್ಸ್‌ಗಳು ಕೂಡ ಗುಂಡಿಗಳಿಂದಾಗಿ ತೊಂದರೆಗೆ ಸಿಲುಕುವಂತಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಗುತ್ತಿಗೆದಾರ ಈ ಭಾಗದಲ್ಲಿ ರಸ್ತೆ ನಿರ್ಮಿಸಿದ್ದು, 2024 ಜೂನ್‌ವರೆಗೆ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ರಸ್ತೆ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಗುರುಗುಂಟಾದಲ್ಲಿ ರಾಷ್ಟ್ರೀಯ ಹೆದ್ದಾರಿ 150 (ಎ) ದುಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಹೆದ್ದಾರಿ ದುರಸ್ತಿಗೊಳಿಸುವಂತೆ ಸೆಕ್ಷನ್ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ.| ವಿಜಯಕುಮಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಇ, ವಿಜಯಪುರ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೆದ್ದಾರಿಯಲ್ಲಿ ಗುಂಡಿಗಳಿರುವುದರಿಂದ ವಾಹನಗಳು ರಸ್ತೆ ಬದಿ ತೆರಳುತ್ತಿವೆ. ಇದರಿಂದಾಗಿ ಪಾದಚಾರಿಗಳು ಜೀವ ಭಯದಲ್ಲಿ ಓಡಾಡುವಂತಾಗಿದೆ.| ಹರೀಶ್ ಜಟ್ಟಿ, ವ್ಯಾಪಾರಿ, ಗುರುಗುಂಟಾ