ಜಿಲ್ಲೆ

ಪ್ಲಾಸಿಕ್ ಉತ್ಪಾದನಾ ಕ್ಷೇತ್ರದ ಅವಕಾಶ ಸದ್ಬಳಕೆ ಮಾಡಿಕೊಳ್ಳಿ:ಅರವಿಂದ್ ಮೆಹ್ತಾ ಕರೆ

ಹರೀಶ್​​ ಕೆ.ಸಿ.

ಬೆಂಗಳೂರು: ವಿದೇಶಗಳಿಂದ ದೇಶಕ್ಕೆ 2021-22ರಲ್ಲಿ ಅಂದಾಜು 37,500 ಕೋಟಿ ರೂ.ಮೌಲ್ಯದ ಪ್ಲಾಸ್ಟಿಕ್ ಉತ್ಪನ್ನ ಆಮದು ಆಗಿದ್ದು, ಆಮದು ಅವಲಂಬನೆ ತಪ್ಪಿಸಲು ಪ್ಲಾಸಿಕ್ ಉತ್ಪಾದನಾ ಕ್ಷೇತ್ರದ ಅವಕಾಶವನ್ನು ಉದ್ಯಮಿಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಅರವಿಂದ್ ಮೆಹ್ತಾ ಕರೆ ನೀಡಿದ್ದಾರೆ.

ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘ (ಎಐಪಿಎಂಎ) ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪ್ಲಾಸ್ಟಿಕ್ ಕೈಗಾರಿಕೆಗಳ ಬೆಳವಣಿಗೆ’ ಸಮಾವೇಶದಲ್ಲಿ ಮಾತನಾಡಿದರು.

ಚೀನಾದಿಂದ ಶೇ.48 ಪ್ಲಾಸ್ಟಿಕ್ ವಸ್ತು ದೇಶಕ್ಕೆ ಆಮದಾಗುತ್ತಿವೆ.ಇದನ್ನು ತಪ್ಪಿಸಿ ಸ್ವಾವಲಂಬನೆ ಸಾಧಿಸಲು ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಪ್ಲಾಸ್ಟಿಕ್ ಕ್ಷೇತ್ರದ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ‘ಡಿಜಿಟಲ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಹಾಗೂ ‘ಮೇಕ್ ಇನ್ ಇಂಡಿಯಾ’ ಯೋಜನೆಗಳು ಪ್ಲಾಸ್ಟಿಕ್ ವಲಯಕ್ಕೆ ವೇಗವರ್ಧಕವಾಗಿವೆ. ಪ್ಲಾಸ್ಟಿಕ್ ವಲಯದಲ್ಲಿ ನಮ್ಮ ದೇಶ ಸ್ವಾವಲಂಬನೆ ಗುರಿ ಹೊಂದಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದರು.

ಎಐಪಿಎಂಎ ಅಧ್ಯಕ್ಷ ಮಯೂರ್ ಡಿ.ಶಾ ಮಾತನಾಡಿ, ವಿಶ್ವದ ಪ್ರಮುಖ ಪ್ಲಾಸ್ಟಿಕ್ ಉತ್ಪಾದನಾ ತಾಣವಾಗಿ ಭಾರತ ಹೊರಹೊಮ್ಮಲು ಅವಕಾಶವಿದೆ. ವಾರ್ಷಿಕ 7 ಲಕ್ಷ ಕೋಟಿ ರೂ.ಮೌಲ್ಯದ ಪ್ಲಾಸ್ಟಿಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೇಶವನ್ನು 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ಲಾಸ್ಟಿಕ್ ಕೈಗಾರಿಕೆ ಪ್ರಮುಖ ಪಾತ್ರವಹಿಸಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷರಾದ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಪ್ಲಾಸ್ಟಿಕ್ ಉತ್ಪನ್ನಗಳನ್ನ ತಯಾರಿಸುತ್ತಿವೆ. ಆದರೆ, ಜನರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಉತ್ಪಾದಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ಮಾತ್ರ ನಿಷೇಧಿಸಲಾಗಿದೆ. ಬಹುಬಳಕೆ ಹಾಗೂ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಹಿತರಕ್ಷಣೆಯನ್ನು ಸರ್ಕಾರ ಕಾಪಾಡಬೇಕು ಎಂದರು. ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಸೇರಿ ದೇಶದ ವಿವಿಧ ರಾಜ್ಯಗಳ ಪ್ಲಾಸ್ಟಿಕ್ ಉತ್ಪಾದಕರು ಉಪಸ್ಥಿತರಿದ್ದರು.