ಜಿಲ್ಲೆ

ಅಡಕೆ ಕೊಳೆರೋಗ ನಿಯಂತ್ರಣ ಕ್ರಮ ಅವಶ್ಯ

ಇಂದಿರಾ ಎನ್ ಕೆ

ಕುಂದಾಪುರ: ನಿರಂತರ ಮಳೆಯಿಂದಾಗಿ ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕಿನಾದ್ಯಂತ ಅಡಕೆ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣ, ಮಣ್ಣಿನಲ್ಲಿ ಹೆಚ್ಚಿದ ತೇವಾಂಶ ರೋಗ ಉಲ್ಬಣವಾಗಲು ಸಹಕಾರಿಯಾಗುತ್ತದೆ. ಹೀಗಾಗಿ ರೈತರು ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೇಮಂತ್ ಕುಮಾರ್ ಎಲ್.ತಿಳಿಸಿದ್ದಾರೆ.

ಕೊಳೆ ರೋಗ ಭಾದಿತ ತೋಟಗಳಲ್ಲಿ ತುರ್ತು ನಿಯಂತ್ರಣಕ್ಕಾಗಿ ಮೆಟಲಾಕ್ಸೆಲ್ 35% ಶಿಲೀಂದ್ರ ನಾಶಕವನ್ನು 1.50 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ನಂತರ ಕನಿಷ್ಠ 2 ಗಂಟೆಗಳ ಮಳೆ ರಹಿತ ವಾತಾವರಣ ಅವಶ್ಯ. ಒಂದು ವಾರದ ತರುವಾಯ ಶೇ. 1ರ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು. ಕೊಳೆ ಭಾದಿತ ತೋಟಗಳಲ್ಲಿ ಈ ಮೇಲಿನ ಸಿಂಪರಣೆಗಳನ್ನು ಕೈಗೊಳ್ಳುವಾಗ ಅಡಕೆ ಗೊನೆಗಳಿಗೆ ವಾತ್ರ ಸಿಂಪಡಿಸದೇ ಸುಳಿ, ಸೋಗೆ ಹಾಗೂ ಹೊಡೆ ಭಾಗಗಳಿಗೂ ಸಿಂಪಡಿಸುವುದರಿಂದ ಮುಂದೆ ಬರುವ ಶಿರ ಕೊಳೆರೋಗ ಹಾಗೂ ಸುಳಿ ಕೊಳೆರೋಗಗಳನ್ನು ನಿಯಂತ್ರಿಸಬಹುದಾಗಿದೆ. ಹೆಚ್ಚಿನ ವಾಹಿತಿಗಾಗಿ ಉಡುಪಿ ತೋಟಗಾರಿಕೆ ಇಲಾಖೆಯ ಕ್ಷೇತ್ರದ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.