ಗಂಗಾವತಿ: ಸೇವಾಭದ್ರತೆ ಮತ್ತು ವೇತನ ವಿತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ತಾಲೂಕು ಘಟಕದ ಸದಸ್ಯರು ತಾಲೂಕು ಆಡಳಿತ ಸೌಧದ ಮಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಮೈದಾನದಿಂದ ತಾಲೂಕು ಆಡಳಿತ ಸೌಧದವರೆಗೂ ಕಪ್ಪುಪಟ್ಟಿ ಧರಿನಿಸಿಕೊಂಡು ಪ್ರತಿಭಟನಾ ರ‌್ಯಾಲಿ ನಡೆಸಿದ ಸದಸ್ಯರು, ಗ್ರೇಡ್2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷ ಎ.ಕೆ.ಮಹೇಶಕುಮಾರ ಮಾತನಾಡಿ, ಸರ್ಕಾರ ಕಳೆದ ಮೂರು ತಿಂಗಳಿಂದ ವೇತನ ನೀಡದೇ ನಿರ್ಲಕ್ಷಿಸುತ್ತಿದ್ದು, 20 ವರ್ಷಗಳಿಂದ ದುಡಿಯುತ್ತಿದ್ದರೂ ಕಾಯಂಗೊಳಿಸುತ್ತಿಲ್ಲ. ಸೇವಾಭದ್ರತೆ ಇಲ್ಲದ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಅತಂತ್ರದಲ್ಲಿ ಜೀವನ ನಡೆಸುತ್ತಿದ್ದಾರೆ. ಬಾಕಿ ವೇತನ ಮತ್ತು ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಕಾರ್ಯದರ್ಶಿ ಪವನಕುಮಾರ ಗುಂಡೂರು, ಪದಾಧಿಕಾರಿಗಳಾದ ಸತೀಶ್ ಕೊಂತಂ, ನೀಲಕಂಠ, ಮಂಜಣ್ಣ ಪೂಜಾರ್, ನಟರಾಜ್ ನಾಯಕ್, ಖಾಜಾಸಾಬ್, ತಿಪ್ಪೇರುದ್ರ, ಡಾ. ಸೋಮಶೇಖರ್, ಶಿವಕುಮಾರ್ ಉಪಾಸಿ, ದೊಡ್ಡಬಸಮ್ಮ, ಲಕ್ಷ್ಮೀದೇವಿ, ರೇಣುಕಾ ಇತರರಿದ್ದರು.