ಕುರುಗೋಡು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳು ಅವಧಿ ಒಳಗಡೆ ಪೂರ್ಣಗೊಳಿಸುವುದರ ಜತೆಗೆ ಗುಣಮಟ್ಟತೆಯನ್ನು ಕಾಪಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್ ಹೇಳಿದರು.
ಸಮೀಪದ ಏಳುಬೆಂಚಿ ಗ್ರಾಪಂ ವ್ಯಾಪ್ತಿಯ ವೇಣಿವೀರಾಪುರ ಗ್ರಾಮದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಮೃತ ಸರೋವರ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದರು. ಅವಧಿಪೂರ್ಣ ಕಾಮಗಾರಿ ಮುಗಿಯುವುದರಿಂದ ಅನುಕೂಲವಾಗಲಿದೆ. ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸುವ ಕಾರ್ಯ ಮಾಡಬೇಕು ಎಂದರು.
ಏಳುಬೆಂಚಿ ಗ್ರಾಮದ ತಿಮ್ಮಲಾಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 5 ಲಕ್ಷ ರೂ., ಬಸವಣ್ಣ ಕ್ಯಾಂಪ್ ನ ಶಾಲೆಯಲ್ಲಿ 3 ಲಕ್ಷ ರೂ.,ಮತ್ತು ಸಿದ್ದಮ್ಮನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಾದನಹಟ್ಟಿ ಗ್ರಾಮದಲ್ಲಿ 26 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನು ಪರಿಶೀಲಿಸಿದರು. ವದ್ದಟ್ಟಿ ಗ್ರಾಮದ ವರಗ ಬಸಮ್ಮ ಅವರು ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯ 1.32 ಲಕ್ಷ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಡ್ರಾಗನ್ ಫ್ರೂಟ್ ಮತ್ತು ಬಾದನಹಟ್ಟಿ ಗ್ರಾಮದ ಪಾರ್ವತಮ್ಮ 48 ಸಾವಿರ ಅನುದಾನದಲ್ಲಿ ಬೆಳೆದಿರುವ ಕರಿಬೇವು ತೋಟಕ್ಕೆ ಭೇಟಿ ನೀಡಿದರು.
ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ, ತಾಂತ್ರಿಕ ಸಂಯೋಜಕಿ ಅರುಣ ಜ್ಯೋತಿ, ಐಸಿಇ ಸಂಯೋಜಕ ಚಂದ್ರಶೇಖರ್, ರಾಮರೆಡ್ಡಿ ಇನ್ನಿತರರಿದ್ದರು.