ಜಿಲ್ಲೆ

ಗ್ರಾಮಾಯಣ ಫಲಿತಾಂಶದ ಬೆನ್ನಲ್ಲೇ ಕೈ-ಕೈ ಮಿಲಾಯಿಸಿದ್ರು ವಿಜೇತ-ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು!

ನೆಲಮಂಗಲ: ಗ್ರಾಮ ಪಂಚಾಯಿತಿ ಚುನಾವಣಾ ಸಮರದ ಫಲಿತಾಂಶ ಬಂದ ಕೂಡಲೇ ಇಲ್ಲೊಂದು ಗ್ರಾಮದಲ್ಲಿ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಹೊಡೆದಾಟ ನಡೆಸಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಈ ಗಲಾಟೆ ನಡೆದಿರುವಂಥದ್ದು. ಅನಿಲ್ (25) ಮತ್ತು ಕೆಂಪರಾಜು (37) ಹಲ್ಲೆಗೊಳಗಾದವರು. ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಗರಾಜು, ಗೋಪಾಲಯ್ಯ, ಭಾಗ್ಯಮ್ಮ ವಿಜೇತ ಅಭ್ಯರ್ಥಿಗಳು. ಸಿದ್ದರಾಜಯ್ಯ, ಅಶೋಕ್ ಕುಮಾರ್, ಯಶೋದಾ ಪರಾಜಿತ ಅಭ್ಯರ್ಥಿಗಳು. ಗೆಲುವು ಕಂಡ ಅಭ್ಯರ್ಥಿಗಳನ್ನು ಒಳಗೊಂಡಂತೆ ಬೆಂಬಲಿಗರು ಊರಿನಲ್ಲಿ ಮೆರವಣಿಗೆ ಮಾಡುತ್ತ ಪರಾಜಿತ ಅಭ್ಯರ್ಥಿಗಳ ಮನೆ ಎದುರು ಸಾಗಿದ ವೇಳೆ ಜಗಳವಾಗಿದ್ದು, ಪರಸ್ಪರ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..