ಜಿಲ್ಲೆ

ಮಗ ವಿಷ ಕುಡಿದಿದ್ದಾನೆ, ಅಲ್ಲಿಗೆ ಹೋಗಲು ಬಸ್​ ಇಲ್ಲ... ಬಸ್​ ನಿಲ್ದಾಣದಲ್ಲೇ ​ಕಣ್ಣೀರಿಟ್ಟ ತಾಯಿ

ಆನೇಕಲ್: ದೊಡ್ಡಬಳ್ಳಾಪುರದಲ್ಲಿ ಮಗ ವಿಷ ಕುಡಿದಿದ್ದಾನೆ, ನಾನು ಅವನ ಬಳಿಗೆ ಹೋಗಲೇ ಬೇಕು... ಆದರಿಲ್ಲಿ ಬಸ್​ಗಳಿಲ್ಲ ಎಂದು ಮಹಿಳೆಯೊಬ್ಬರು ಗೋಳಾಡುತ್ತಿದ್ದ ದೃಶ್ಯ ಇಲ್ಲಿನ ಬಸ್​ ನಿಲ್ದಾಣದಲ್ಲಿ ಭಾನುವಾರ ಕಂಡು ಬಂತು.

ನನ್ನ ಮಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಆಸ್ಪತ್ರೆಗೆ ಹಣ ಕಟ್ಟೋಕೆ ಅಲ್ಲಿ ಯಾರೂ ಇಲ್ಲ. ನಾನು ಈ ಕೂಡಲೇ ಅಲ್ಲಿಗೆ ಹೋಗಬೇಕು.. ಮಗನನ್ನು ನೋಡಬೇಕು.. ದಯವಿಟ್ಟು ದೊಡ್ಡಬಳ್ಳಾಪುರಕ್ಕೆ ಯಾವ ಬಸ್ ಹೋಗುತ್ತೆ ಹೇಳಿ.. ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೊನೆಗೆ ಕೆಲ ಸಮಯದ ಬಳಿಕ ಖಾಸಗಿ ಬಸ್​ನಲ್ಲಿ ಹೋದರು.

ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ಸರ್ಕಾರಿ ಬಸ್​ಗಳ ಸಂಚಾರ ಬಂದ್​ ಆಗಿ ಇಂದಿಗೆ ಮೂರು ದಿನವಾಗಿದೆ.

ಎರಡು ದಿನವಾದರೂ ಸರ್ಕಾರ ನೌಕರರ ಮುಷ್ಕರಕ್ಕೆ ಮಣಿಯಲಿಲ್ಲ. ಹಾಗಾಗಿ ಭಾನುವಾರ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಮುಷ್ಕರವನ್ನು ತೀವ್ರಸ್ವರೂಪಕ್ಕೆ ಕೊಂಡೊಯ್ದರು. ಸಾರಿಗೆ ನೌಕರರು ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.