ಗಂಗೊಳ್ಳಿ: ಕುಂದಾಪುರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ನಾಗರಿಕರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ವಿ.ಗಡಹದ್ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆ ಆಡಳಿತ ಅವ್ಯವಸ್ಥೆ, ಸಾರ್ವಜನಿಕ ಚರಂಡಿಗೆ ಸರ್ಕಾರಿ ಆಸ್ಪತ್ರೆ ಕೊಳಚೆ ನೀರು ಬಿಟ್ಟಿರುವ ಬಗ್ಗೆ ಹಾಗೂ ಆಡಳಿತ ವ್ಯವಸ್ಥೆ ಬದಲಾವಣೆ ಬಗ್ಗೆ ಗಮನಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಕೊಳಚೆ ನೀರನ್ನು ನೇರವಾಗಿ ರಸ್ತೆ ಬದಿ ಸಾರ್ವಜನಿಕ ತೋಡಿಗೆ ಹರಿ ಬಿಡಲಾಗಿದೆ. ಆಪರೇಷನ್ ಕೊಠಡಿಯಲ್ಲಿ ಸರಿಯಾದ ವ್ಯವಸ್ಥೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ನೀಡುವ ಸಂಪರ್ಕ ಅಧಿಕಾರಿ ಇಲ್ಲ. ಆಸ್ಪತ್ರೆ ಅವ್ಯವಸ್ಥೆಗೊಳಿಸಿರುವ ಈ ಆಡಳಿತ ಮಂಡಳಿ ಮುಖ್ಯಸ್ಥರನ್ನು ಬದಲಾಯಿಸಿ ಉತ್ತಮ ಆಡಳಿತ ನಿರ್ವಹಣೆ ಮಾಡುವ ವೈದ್ಯಾಧಿಕಾರಿಯನ್ನು ನೇಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಶೀಘ್ರವಾಗಿ ಸಾರ್ವಜನಿಕರ ಈ ಅಹವಾಲುಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಕುಂದಾಪುರದ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಜನಸೇವಾ ಟ್ರಸ್ಟ್ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದೆ.