ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಪುತ್ತೂರಿನಿಂದ ಪುರುಷರಕಟ್ಟೆ ಮಾರ್ಗವಾಗಿ ಆನಡ್ಕಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್ ಪದೇ ಪದೆ ಕೈಕೊಡುತ್ತಿರುವುದರಿಂದ ಆ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿ ಬಂದಿದೆ.
ಬಸ್ ಸಂಚಾರ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ಸಮಸ್ಯೆಗೊಳಗಾಗಿರುವ ಈ ಭಾಗದ ವಿದ್ಯಾರ್ಥಿಗಳು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಪುತ್ತೂರಿನಿಂದ ಬೆಳಗ್ಗೆ ಹೊರಟು 8 ಗಂಟೆಗೆ ಸರಿಯಾಗಿ ಆನಡ್ಕ ತಲುಪಿ, ಅಲ್ಲಿಂದ ಹಿಂತಿರುಗಿ ಪುತ್ತೂರಿಗೆ ಹೋಗುತ್ತಿದ್ದ ಬಸ್ ಕಳೆದ ಕೆಲ ಸಮಯದಿಂದ ವಾರದ ಕೆಲವೊಂದು ದಿನಗಳಲ್ಲಿ ಮಾತ್ರ ಬರುತ್ತಿದ್ದು, ಪದೇ ಪದೆ ಕೈಕೊಡುತ್ತಿದೆ. ಆನಡ್ಕ ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ಬಸ್ ಅವಲಂಬಿಸಿಕೊಂಡಿದ್ದಾರೆ. ಆದರೆ ಈ ಬಸ್ ವಾರದಲ್ಲಿ ಎರಡು ಮೂರು ಬಾರಿ ಬರುತ್ತಿಲ್ಲ. ಕಾರಣ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಬಸ್‌ಗಾಗಿ ಕಾದು ಕುಳಿತು ಕೊನೆ ಕ್ಷಣ ಬಸ್ ಬಾರದಿದ್ದಾಗ ವಿದ್ಯಾರ್ಥಿಗಳು ಆಟೋ ರಿಕ್ಷಾ ಮೂಲಕ ಪುತ್ತೂರಿಗೆ ಪ್ರಯಾಣಿಸಬೇಕಾಗಿ ಬರುತ್ತದೆ. ಸಮಯಕ್ಕೆ ಸರಿಯಾಗಿ ರಿಕ್ಷಾಗಳು ಸಿಗುತ್ತಿಲ್ಲ.
ಶಾಸಕರಿಗೆ ಮನವಿ
ಬಸ್ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಆನಡ್ಕ ಭಾಗದ ಕೆಲವು ವಿದ್ಯಾರ್ಥಿನಿಯರು ಮಂಗಳವಾರ ಶಾಸಕ ಅಶೋಕ್‌ಕುಮಾರ್ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿರುವ ಶಾಸಕರು ಸಮಸ್ಯೆ ಬಹೆಗರಿಸುವ ಭರವಸೆ ನೀಡಿದ್ದಾರೆ.
ಆನಡ್ಕಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್ ವಾರದ ಕೆಲವು ದಿನ ಮಾತ್ರ ಬರುತ್ತಿದ್ದು, ಬಸ್ ಬಾರದಿರುವ ದಿನಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಿ ಸರಿಯಾದ ಬಸ್ ವ್ಯವಸ್ಥೆ ಮಾಡಬೇಕು ಎಂಬುವುದು ನಮ್ಮ ಆಗ್ರಹ. ಯಜ್ಞೇಶ್ ಮರಕ್ಕೂರು, ಸಾಮಾಜಿಕ ಮುಂದಾಳು