ಜಿಲ್ಲೆ

ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ

ಸೌಮ್ಯ ಆರ್

ಕಿನ್ನಿಗೋಳಿ: ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ, ಮಂಗಳೂರು ಉತ್ತರ ವಲಯದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ‘ದಿಶಾ’ ಎಂಬ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಕಿರೆಂ(ದಾಮಸ್‌ಕಟ್ಟೆ) ಚರ್ಚ್ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು.

ವಲಯದ 8ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಸಿವಿಲ್ ಸೇವೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸರ್ಕಾರಿ ಉದ್ಯೋಗಗಳ ಕುರಿತು ಮಾಹಿತಿ ನೀಡಲಾಯಿತು.

ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ.ಜೋಕಿಂ ಫರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಸಂದೇಶ ನೀಡಿದರು. ಕೆಥೊಲಿಕ್ ಸಭಾ ಮಂಗಳೂರು ಉತ್ತರ ವಲಯಾಧ್ಯಕ್ಷ ಸ್ಟಾೃನಿ ಮಿರಾಂದಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಂಟನಿ ಎಸ್.ಮರಿಯಪ್ಪ ಡಿ.ಸಿ.ಎಫ್. ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಸರ್ಕಾರಿ ಉದ್ಯೋಗಗಳ ಬಗ್ಗೆ ವಿದ್ಯಾರ್ಥಿಗಳ ಪ್ರಯತ್ನ ಹಾಗೂ ಪಾಲಕರ ಪಾತ್ರದ ಮಹತ್ವ ವಿವರಿಸಿದರು. ಸೇಂಟ್ ಅಲೋಶಿಯಸ್ ಸಿಲ್ ಸೇವೆ ಕಾಲೇಜಿನ ಸಿಬ್ಬಂದಿ ಶರತ್ ಕುಮಾರ್ ಮತ್ತು ಬೆಂಗಳೂರು ಇನ್‌ಸೈಟ್ ಐಎಎಸ್ ಸಿಬ್ಬಂದಿ ನವೀನ್ ಪಾಟೀಲ್ ಜಿ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ಮಾಹಿತಿ ನೀಡಿದರು.

ಕಿರೆಂ ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷ ಮತ್ತು ಕೆಥೊಲಿಕ್ ಸಭಾ ಕಿರೆಂ ಘಟಕ ಅಧ್ಯಕ್ಷ ರೋಹನ್ ಡಿಕೋಸ್ತಾ, ವಲಯ ಖಜಾಂಚಿ ಜೋನ್ ಕಿಶೋರ್ ಡಿಸೋಜ, ವಲಯ ನಿಕಟ ಪೂರ್ವ ಮೆಲ್ರೀಡ ಜೇನ್ ರೊಡ್ರಿಗಸ್, ಪತ್ರಕರ್ತ ವಾಲ್ಟರ್ ನಂದಳಿಕೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಗ್ರೆಟ್ಟಾ ಫೆರ್ನಾಂಡಿಸ್ ವಂದಿಸಿದರು. ಅನಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.