ದೇವದುರ್ಗದ ಜೆಸ್ಕಾಂ ಕಚೇರಿಯಲ್ಲಿ ಏರ್ಪಡಿಸಿದ್ದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಮುಖ್ಯ ಇಂಜಿನಿಯರ್ ವೆಂಕಟೇಶಗೆ ಯರಗುಡ್ಡದ ರೈತ ಶಿವಯೋಗಿ ಮನವಿ ಸಲ್ಲಿಸಿದರು. ಇಇ ಚಂದ್ರಶೇಖರ್ ದೇಸಾಯಿ, ಎಇಇ ಶ್ರೀನಿವಾಸರಾಜು, ಎಇ ವೆಂಕಟೇಶ ಚಿಲ್ಕರಾಗಿ ಇತರರಿದ್ದರು. 
ಜಿಲ್ಲೆ

ಉತ್ತಮ ಸೇವೆ ನೀಡುವುದು ಜೆಸ್ಕಾಂ ಧ್ಯೇಯ

Kopala - Desk - Eraveni

ದೇವದುರ್ಗ: ಗ್ರಾಹಕರಿಗೆ ಉತ್ತಮ ವಿದ್ಯುತ್ ಸೌಲಭ್ಯ ಮತ್ತು ಸಾರ್ವಜನಿಕ ಸೇವೆ ಒದಗಿಸುವುದೇ ಜೆಸ್ಕಾಂ ಧ್ಯೇಯವಾಗಿದೆ. ಹೀಗಾಗಿ ಜನರ ಸಮಸ್ಯೆ ಆಲಿಸಲು ಕುಂದುಕೊರತೆ ಸಭೆ, ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ರಾಯಚೂರು ವೃತ್ತ ವಿಭಾಗದ ಜೆಸ್ಕಾಂ ಮುಖ್ಯ ಇಂಜಿನಿಯರ್ ವೆಂಕಟೇಶ ಹೇಳಿದರು.

ಪಟ್ಟಣದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಪಬ್ಲಿಕ್ ಸರ್ವೀಸ್, ವಾಣಿಜ್ಯ ಬಳಕೆಗೆ ಗುಣಮಟ್ಟದ ವಿದ್ಯುತ್, ಮನೆಗಳಿಗೆ ನಿರಂತರ ಜ್ಯೋತಿ ಸೇರಿ ಸರ್ಕಾರ ವಿವಿಧ ಸ್ಕೀಂ ಸಮರ್ಪಕ ಜಾರಿಗೆ ಶಕ್ತಿಮೀರಿ ಕೆಲಸ ಮಾಡಲಾಗುತ್ತಿದೆ. ಕೆಲ ತಾಂತ್ರಿಕ ದೋಷ, ಕಾಮಗಾರಿ ನಿಮಿತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಸಹಜ. ಈ ಬಗ್ಗೆ ಜನರಿಗೆ ಮುಂಜಾಗ್ರತವಾಗಿ ತಿಳಿಸಲಾಗುತ್ತಿದೆ ಎಂದರು.

ಯರಗುಡ್ಡ ಗ್ರಾಮದ ರೈತ ಶಿವಯೋಗಿ ಮಾತನಾಡಿ, ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಧಿಕಾರಿಗಳು, ಇಂಜಿನಿಯರ್, ಲೈನ್‌ಮನ್‌ಗಳಿಗೆ ಮನವಿ ಮಾಡಿದ್ದೇವೆ. ಇದರಂತೆ ಹಲವು ರೈತರ ಜಮೀನಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. ಟಿಸಿ ಸುಟ್ಟರೆ ಸಮಯಕ್ಕೆ ಸರಿಯಾಗಿ ರಿಪೇರಿ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ವಿದ್ಯುತ್ ವೈಯರ್ ಜೋತು ಬಿದ್ದು ಜನರಿಗೆ ಆತಂಕ ತರಿಸಿವೆ. ಸಮಸ್ಯೆಗೆ ತಕ್ಷಣ ಸ್ಪಂದಿಸಲು ಆದ್ಯತೆ ನೀಡುವಂತೆ ಮನವಿ ಮಾಡಿದರು.

ವೆಂಕಟೇಶ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಕೆಲ ತಾಂತ್ರಿಕ ಸಮಸ್ಯೆಯಿಂದ ತಡವಾಗಿರಬಹುದು. ಎಲ್ಲ ಪರವಾನಗಿ ಸರಿಯಿದ್ದರೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ. ಟಿಸಿ ಸುಟ್ಟರೆ ನಿಯಮಾನುಸಾರ ರಿಪೇರಿ ಮಾಡುತ್ತೇವೆ. ಕಂಬ, ವೈಯರ್, ಸಂಪರ್ಕ ಸಮಸ್ಯೆ ಬಗ್ಗೆ ತಕ್ಷಣ ಸ್ಪಂದಿಸಲು ಜೆಸ್ಕಾಂ ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದರು.

ಇಇ ಚಂದ್ರಶೇಖರ್ ದೇಸಾಯಿ, ಎಇಇ ಶ್ರೀನಿವಾಸರಾಜು, ಎಇ ವೆಂಕಟೇಶ ಚಿಲ್ಕರಾಗಿ, ಶಾಖಾಧಿಕಾರಿಗಳಾದ ಫಿರೋಜ್, ಪ್ರಮುಖರಾದ ಮಿಥುನ್ ಮಸರಕಲ್, ಸುನೀಲ್‌ಕುಮಾರ ಜಾಲಹಳ್ಳಿ, ಮಹಮ್ಮದ್ ರಫಿ ಅರಕೇರಾ, ಗೋಪಾಲ ಗಬ್ಬೂರು, ಮಲ್ಲಿಕಾರ್ಜುನ ಗಲಗ ಇತರರಿದ್ದರು.