ಹರಪನಹಳ್ಳಿಯ ಐಬಿ ವೃತ್ತದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ರೈತರು ಬಿತ್ತನೆ ಬೀಜಗಳನ್ನು ಖರೀದಿಸುತ್ತಿರುವುದು 
ಜಿಲ್ಲೆ

ಉತ್ತಮ ಮಳೆ, ಹೆಚ್ಚುವರಿ ಎರಡು ಆರ್‌ಎಸ್‌ಕೆ ಆರಂಭ

ಶಶಿಧರ ಎಲ್

ಹರಪನಹಳ್ಳಿ: ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭಿಸಲಾಗಿದೆ. ಪಟ್ಟಣ ಸೇರಿ ತಾಲೂಕಿನ ನಾಲ್ಕು ಆರ್‌ಎಸ್‌ಕೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಚಿಗಟೆರಿ ಹೋಬಳಿಯ ಸಾಸ್ವಿಹಳ್ಳಿ ಹಾಗೂ ತೆಲಿಗಿ ಹೋಬಳಿಯ ಹಲುವಾಗಲಿನಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಲಾಗಿದೆ. ಮೆಕ್ಕೆಜೋಳ ಸಿಜೆಂಟಾ ಇಂಡಿಯಾ, ಗಂಗಾ ಕಾವೇರಿ ಕಂಪನಿಯ ತಳಿ ವಿತರಿಸಲಾಗುತ್ತಿದೆ.

ತೊಗರಿಯಲ್ಲಿ ಶಾಂತಿ ಟ್ರೇಡಿಂಗ್, ಸಾಯಿ ಕಂಪನಿ, ಕರ್ನಾಟಕ ಬೀಜ ನಿಗಮ ಕಂಪನಿಯ ತಳಿ ಹಾಗೂ ಬಿಳಿಜೋಳಕ್ಕೆ ಶಾಂತಿ ಟ್ರೇಡಿಂಗ್ ಕಂಪನಿಯ ಬೀಜಗಳನ್ನು ವಿತರಿಸಲಾಗುತ್ತಿದೆ.

ತಾಲೂಕಿನ ಹಲವು ಕಡೆ ಉತ್ತಮ ಮಳೆಯಾಗಿದ್ದು, ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಈಗಾಗಲೇ ಜಮೀನು ಸಿದ್ಧಪಡಿಸಿರುವ ರೈತರು, ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ತಾಲೂಕಾದ್ಯಂತ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ತಿಳಿಸಿದರು.