ಹನುಮಸಾಗರ: ಪಿಯುಸಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ದಾರಿ ತಪ್ಪುವುದು ಉಂಟು, ಇಂತಹ ಸಮಯದಲ್ಲಿ ಉತ್ತಮ ಭವಿಷ್ಯಕ್ಕಾಗಿ ದುಶ್ಚಟಗಳ ದಾಸರಾಗದೇ ಓದಿನ ಕಡೆಗೆ ಗಮನ ಹರಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಸಮೀಪದ ಹನುಮನಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಸರ್ಕಾರಿ ಪಿಯು ಕಾಲೇಜುಗಳ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿವಿಧ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ.
ಈ ಟೀನೇಜ್‌ನಲ್ಲಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಭವಿಷ್ಯ ಚನ್ನಾಗಿ ಇರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಮನಸ್ಸನ್ನು ಬೇರೆಡೆ ಹರಿಸದೆ ಸರಿಯಾಗಿ ಅಭ್ಯಾಸ ಮಾಡಬೇಕು ಎಂದರು.
ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಮಾತನಾಡಿ, ಉತ್ತಮ ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪಿಯುಸಿಯೇ ಮೊದಲ ಮೆಟ್ಟಿಲಾಗಿದ್ದು, ಅದನ್ನು ಹಾಳು ಮಾಡಿಕೊಳ್ಳಬಾರದು. ಪುಸ್ತಕಗಳನ್ನು ಓದಬೇಕು.
ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಕೆ ಮಾಡುವುದರ ಮೂಲಕ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ಬದಿಗೊತ್ತಿ ಅಭ್ಯಾಸದ ಕಡೆ ಗಮನ ಹರಿಸಬೇಕು. ಮುಂದಿನ ಭವಿಷ್ಯ ಉಜ್ವಲವಾಗಿರಲು ಪಿಯುಸಿಯಲ್ಲಿಯೇ ಭದ್ರ ಭೂನಾದಿ ಹಾಕಿಕೊಳ್ಳಿ ಎಂದರು.
ಪ್ರಾಚಾರ್ಯ ಸಂಜಯ ಬಡಿಗೇರ, ಬಿಜೆಪಿ ತಾಲೂಕಧ್ಯಕ್ಷ ಬಸವರಾಜ ಹಳ್ಳೂರ, ಮುಖಂಡರಾದ ಪ್ರಭಾಕರ್ ಚಿನಿ, ಮಲ್ಲಣ್ಣ ಪಲ್ಲೆದ, ಕೆ.ಮಹೇಶ, ಈರಣ್ಣ ಗಜೇಂದ್ರಗಡ, ಸಂತೋಷ ಕೆಂಚರ, ಸಂಗಪ್ಪ ಹುಲ್ಲೂರ, ಸಿದ್ದಪ್ಪ ರೊಟ್ಟಿ, ಸೋಮಣ್ಣ ಇಂಗಳದಾಳ, ಅಂದಪ್ಪ ತಳವಾರ, ಸುರೇಶ ಬೆನಾಳ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಕಾಲೇಜು ಸಿಬ್ಬಂದಿಗಳು ಇದ್ದರು.