ಜಿಲ್ಲೆ

ಉತ್ತಮ ಆಹಾರ ಪದ್ಧತಿ ಆರೋಗ್ಯಕ್ಕೆ ಮೇಲ್ಪಂಕ್ತಿ: ಆಸ್ಟರ್ ಆಸ್ಪತ್ರೆಯ ಡಾ. ಸತ್ಯಜಿತ್ ಗೋಧಿ ಸಲಹೆ! Dr. Satyajit Godhi

Dr. Satyajit Godhi : ಉತ್ತಮ ಮಟ್ಟದ ಜೀವನಶೈಲಿ ಅಳವಡಿಸಿಕೊಳ್ಳುವ ಜತೆಗೆ ನಿಯಮಿತ ವ್ಯಾಯಾಮ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಹಾಗೂ ನಿತ್ಯ 7-8 ಗಂಟೆ ನಿದ್ರೆ ಮಾಡುವ ಹವ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯಭರಿತ ಜೀವನ ನಡೆಸಲು ಸಾಧ್ಯವಿದೆ. ಈ ಮೇಲ್ಪಂಕ್ತಿಯನ್ನು ಎಲ್ಲರೂ ಅಳವಡಿಸಿಕೊಂಡು ಮುನ್ನಡೆದಲ್ಲಿ ಯಾವುದೇ ರೋಗಬಾಧೆ ಸುಳಿಯದು ಎಂದು ಬೆಂಗಳೂರಿನ ಜೆ.ಪಿ.ನಗರದ ಆಸ್ಟರ್ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್, ಲ್ಯಾಪ್ರೋಸ್ಕೋಪಿಕ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಸತ್ಯಜಿತ್ ಗೋಧಿ ತಿಳಿಸಿದ್ದಾರೆ.

ಮನುಷ್ಯನ ಆರೋಗ್ಯದಲ್ಲಿ ಜೀರ್ಣಾಂಗ ವ್ಯವಸ್ಥೆ ಬಹುಮುಖ್ಯ. ಉದರದ ಬಗ್ಗೆ ಕಾಳಜಿ ವಹಿಸಬೇಕು. ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಶಕ್ತಿ ನೀಡುವ ಜತೆಗೆ ಜೀವನೋತ್ಸವವನ್ನು ತುಂಬುತ್ತದೆ. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ನಾಣ್ನುಡಿಯಂತೆ ಆಹಾರ ಕ್ರಮ ತಿಳಿದ ವ್ಯಕ್ತಿಯು ಜೀವಿತಾವಧಿವರೆಗೂ ಆರೋಗ್ಯಭರಿತ ಬದುಕು ಸಾಗಿಸಬಲ್ಲ ಎಂದು ‘ವಿಜಯವಾಣಿ’ ಪತ್ರಿಕಾ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದಲ್ಲಿ ಪ್ರತಿಪಾದಿಸಿದರು.

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಲ್ಲಿ ಹಲವಾರು ಬದಲಾವಣೆ ಆಗಿರುವ ಪರಿಣಾಮ ಉದರ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದೆ. ಇದಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಇದನ್ನು ಉದರ ಸಮಸ್ಯೆ ಎದುರಿಸುತ್ತಿರುವ ನಾಗರಿಕರು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದು ಕಿವಿಮಾತು ಹೇಳಿದರು. ವೈದ್ಯಕೀಯ ಕೋರ್ಸ್ ಸೇರಿ ಜನರ ರೋಗ ನಿವಾರಣೆಗೆ ಬೇಕಾದ ನೈಪುಣ್ಯತೆ ಪಡೆಯಲು ಯುವ ವೈದ್ಯರು ಗ್ಯಾಸ್ಟ್ರೋಎಂಟರಾಲಜಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೊಸ ಚಿಕಿತ್ಸಾ ಪದ್ಧತಿ, ಟೆಕ್ನಿಕ್​ಗಳನ್ನು ಕರಗತ ಮಾಡಿಕೊಂಡಿರುವ ವೈದ್ಯರು ಆಸ್ಟರ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಮುಂದಿನ ವಾರದಿಂದ ರೋಬಾಟಿಕ್ ಸೇವೆ ಕೂಡ ಆರಂಭಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಸಂಶೋಧನೆ ನಿರಂತರ

ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯುತ್ತಲೇ ಇರುತ್ತದೆ. ಆದರೆ, ತಳಮಟ್ಟದಲ್ಲಿ ಬಳಕೆಗೆ ಲಭ್ಯವಾಗುವುದು, ಜನರಿಗೆ ಉಪಯೋಗಕ್ಕೆ ಬರುವುದು ತುಂಬ ಕಡಿಮೆ. ಉದಾಹರಣೆಗೆ ಕ್ಯಾನ್ಸರ್ ಸಂಬಂಧಪಟ್ಟಂತೆ ಹಲವು ಸಂಶೋಧನೆ ನಡೆಯುತ್ತಿವೆ. ಕ್ಯಾನ್ಸರ್​ಗೆ ಶಾಶ್ವತ ಮದ್ದಿಲ್ಲ, ರೋಗ ವಾಸಿಯಾದ ಬಳಿಕ ಮತ್ತೆ ಮರಳಬಹುದು ಎಂದು ಹೇಳಲಾಗದು. ಈ ಬಗ್ಗೆ ಸಂಶೋಧನೆ ಪ್ರಗತಿಯಲ್ಲಿದೆ.

ಸ್ವಯಂ ಚಿಕಿತ್ಸೆಗೆ ಯತ್ನಿಸಬೇಡಿ

ಹೆಚ್ಚಿನ ರೋಗಿಗಳಲ್ಲಿ ಪೈಲ್ಸ್​ನ ಕುರಿತಾಗಿ ಸರಿಯಾದ ಮಾಹಿತಿ ಇರುವುದಿಲ್ಲ. ಮಲದಲ್ಲಿ ರಕ್ತ, ಗೆಡ್ಡೆ ಅಥವಾ ನೋವಾದರೆ ಪೈಲ್ಸ್ ಎಂದು ಅಂದುಕೊಳ್ಳುತ್ತಾರೆ. ನಿಜವಾಗಿಯೂ ಸಣ್ಣ ಗೆಡ್ಡೆಯಾಗಿ ಪೈಲ್ಸ್ ಆಗಿದ್ದರೆ ಔಷಧದಿಂದಲೇ ಗುಣಪಡಿಸಬಹುದು. ಜತೆಗೆ ಹೆಚ್ಚಾಗಿ ನೀರು ಕುಡಿಯುವುದು, ಸರಿಯಾಗಿ ನಿದ್ರೆ ಮಾಡುವುದು, ಫೈಬರ್ ಅಂಶದ ಆಹಾರ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಈ ರೀತಿ ಮಾಡುವುದರಿಂದ ರಕ್ತಸ್ರಾವ ಕಡಿಮೆ ಮಾಡಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ಯಾವತ್ತೂ ಸ್ವತಃ ಚಿಕಿತ್ಸೆ ಮಾಡಲು ಹೋಗಬಾರದು. ಇಂತಹ ಸಮಸ್ಯೆಗಳಿಗೆ ವರ್ಷಗಟ್ಟಲೆ ಸ್ವತಃ ಚಿಕಿತ್ಸೆ ಮಾಡಿ, ರಕ್ತಸ್ರಾವ ಹೆಚ್ಚಿದಾಗ ವೈದ್ಯರನ್ನು ಭೀಟಿ ಮಾಡಿದ ಸಂದರ್ಭ ಕೆಲವರಿಗೆ ಕ್ಯಾನ್ಸರ್ ಪತ್ತೆಯಾದ ಉದಾಹರಣೆಯೂ ಇದೆ. ಇದೇ ರೀತಿ ಫಿಶರ್ಸ್, ಫಿಸ್ಟುಲಾ ಸಮಸ್ಯೆಗಳಿಗೆ ವೈದ್ಯರ ಸಲಹೆ, ಚಿಕಿತ್ಸೆ ಪಡೆಯುವುದು ಸೂಕ್ತ.

ಕಿಡ್ನಿ ಸಮಸ್ಯೆ ಕಡೆಗಣಿಸದಿರಿ

ನಾವು ಸೇವಿಸುವ ಆಹಾರದ ಕಾರಣದಿಂದ ಕಿಡ್ನಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಟೊಮ್ಯಾಟೋ, ಪಾಲಕ್ ಸೇವಿಸುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಒತ್ತಡದ ಜೀವನ, ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿ ರೋಗಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಇದರಿಂದ ಮೂತ್ರನಾಳದ ಸೋಂಕು ಕಾಡಬಹುದು. 5 ಎಂಎಂಗಿಂತ ಹೆಚ್ಚಿನ ಗಾತ್ರದ ಕಲ್ಲುಗಳನ್ನು ಸರ್ಜರಿ ಮಾಡಿ ಹೊರತೆಗೆಯಬೇಕಾಗುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯುವದರಿಂದ ಈ ಸಮಸ್ಯೆಯಿಂದ ಹೊರಬಹುದು ಎಂದು ಡಾ. ಸತ್ಯಜಿತ್ ಗೋಧಿ ಸಲಹೆ ನೀಡಿದ್ದಾರೆ.

ವೈದ್ಯರ ಮೇಲಿನ ಹಲ್ಲೆ ಇಳಿಕೆ

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂಬ ಕಾರಣಕ್ಕೆ ರೋಗಿ ಕಡೆಯವರು ವೈದ್ಯರ ಮೇಲೆ ಹಲ್ಲೆ ಮಾಡುವುದುಂಟು. ಆದರೆ, ವೈದ್ಯರು ರೋಗಿಯನ್ನು ಉಳಿಸಲು ಗರಿಷ್ಠ ಪ್ರಯತ್ನ ಮಾಡಿಯೇ ಮಾಡುತ್ತಾರೆ. ಕೆಲವೊಮ್ಮೆ ವೈದ್ಯಕೀಯ ಕಾರಣಕ್ಕಾಗಿ ಸಾವು ಘಟಿಸಿದರೂ ಅದಕ್ಕೆ ಡಾಕ್ಟರ್​ಗಳನ್ನೇ ದೂಷಿಸಲಾಗುತ್ತಿದೆ. ಇಂತಹ ಹಲ್ಲೆ ಪ್ರಕರಣ ತಡೆಗೆ ಸರ್ಕಾರ ಕಾಯ್ದೆ ರೂಪಿಸಿದೆ. ಇದರ ಪರಿಣಾಮ ಇತ್ತೀಚಿನ ದಿನಗಳಲ್ಲಿ ಹಲ್ಲೆ ಪ್ರಕರಣ ಕಡಿಮೆಯಾಗಿದೆ. ಸಮಸ್ಯೆ ಎದುರಿಸಿದವರು ಕೆಎಂಸಿಗೆ ದೂರು ದಾಖಲಿಸಿದರೆ ಕಾನೂನು ಪ್ರಕಾರ ತನಿಖೆ ನಡೆಸಿ ನ್ಯಾಯ ನೀಡಲಾಗುತ್ತದೆ. ಹಾಗಾಗಿ ನಾಗರಿಕರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎನ್ನುತ್ತಾರೆ ಡಾ. ಸತ್ಯಜಿತ್.

ಜೀವನಕ್ರಮಕ್ಕೆ ಅನುಗುಣವಾಗಿ ರೋಗ

ನಾವು ತಿನ್ನುವ ಆಹಾರದ ಮೇಲೆ ಗಮನ ಇಡಬೇಕಿರುವುದು ಅವಶ್ಯ. ಜಂಕ್​ಫುಡ್ ಅಧಿಕವಾಗಿ ಸೇವಿಸುವುದರಿಂದ ಆರೋಗ್ಯ ಹಾಳಾಗುತ್ತಿದ್ದು, ಪೋಷಕಾಂಶಯುಕ್ತ ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳಬೇಕು. ಮದ್ಯಪಾನ ಮಾಡುವುದರಿಂದಲೂ ಲಿವರ್ ಮತ್ತು ಪ್ಯಾಂಕ್ರಿಯಾಸ್ ಎರಡೂ ಹಾಳಾಗುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಪೋಷಕಾಂಶದ ಕೊರತೆ ಇದ್ದು, ಶೇ. 80-90 ಕಾಬೋಹೈಡ್ರೇಟ್ ಸೇವನೆ ಮಾಡುತ್ತಾರೆ. ಹೀಗಿರುವಾಗ ಬೊಜ್ಜು, ಫ್ಯಾಟಿ ಲಿವರ್ ಹೆಚ್ಚಾಗುವುದು ಸಾಮಾನ್ಯ ವಾಗಿದೆ.

ರಾತ್ರಿ ಪಾಳಿಯವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯ

ಐಟಿ ಉದ್ಯೋಗಿಗಳು ಸೇರಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಅಂತಹವರಿಗೆ ಚಿಕಿತ್ಸೆ ನೀಡುವಾಗ ವೈದ್ಯರಾಗಿ ನಮಗೇ ಗೊಂದಲವಾಗುತ್ತದೆ. ಏಕೆಂದರೆ ಅವರು ಮಲಗುವ ಸಮಯ, ಎಚ್ಚರಿಕೆ ಇರುವ ಸಮಯ ತದ್ವಿರುದ್ಧವಾಗಿರುತ್ತದೆ. ಔಷಧ ಯಾವ ಸಮಯಕ್ಕೆ ಬರೆಯಬೇಕೆಂಬ ಗೊಂದಲವಾಗುತ್ತದೆ. ಈ ವಿಚಾರದಲ್ಲಿ ರೋಗಿಗಳು ವೈದ್ಯರೊಂದಿಗೆ ಸಹಕರಿಸಬೇಕು ಎಂದು ಡಾ.ಸತ್ಯಜಿತ್ ಸಲಹೆ ನೀಡಿದ್ದಾರೆ.

ನೂತನ ತಂತ್ರಜ್ಞಾನ ಅಳವಡಿಕೆ

ನಮ್ಮ ಆಸ್ಪತ್ರೆಯಲ್ಲಿ ರೋಗಪತ್ತೆಯಿಂದ ಹಿಡಿದು ಚಿಕಿತ್ಸೆ ತನಕ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಲೇಸರ್ ಶಸ್ತ್ರಚಿಕಿತ್ಸೆ, ಲ್ಯಾಪ್ರೊಸ್ಕೋಪ್, ಸಿಟಿ-ಎಂಆರ್​ಐ ಸ್ಕಾ್ಯನ್, ಎಂಡೋಸ್ಕೋಪ್, ಅಲ್ಟ್ರಾ ಸೌಂಡ್ ಹಾಗೂ ಇತ್ತೀಚೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಯನ್ನು ಅಳವಡಿಸಲಾಗಿದೆ. ಸಂಸ್ಥೆಯ ವೈದ್ಯರು 3 ಅಥವಾ 6 ತಿಂಗಳಿಗೊಮ್ಮೆ ಕಂಟಿನ್ಯುಯಿಂಗ್ ಮೆಡಿಕಲ್ ಎಜುಕೇಶನ್​ನಲ್ಲಿ (ಸಿಎಂಇ) ಪಾಲ್ಗೊಳ್ಳುತ್ತೇವೆ. ವೈದ್ಯರು ಪದವಿ ಪಡೆದ ಬಳಿಕ ವೃತ್ತಿಯಲ್ಲಿ ಮುಂದುವರಿಯುತ್ತಿರುವಾಗ ಸಿಎಂಇಗಳಲ್ಲಿ ಭಾಗಿಯಾಗುವುದು ತುಂಬ ಮುಖ್ಯವಾಗುತ್ತದೆ. ಇದರಿಂದ ವೈದ್ಯರು ಹೊಸ ವಿಚಾರಗಳನ್ನು, ಬದಲಾವಣೆಗಳನ್ನು ಕಲಿತುಕೊಳ್ಳಲು ಸಾದ್ಯವಾಗುತ್ತದೆ.

ನಾಗರಿಕರಿಗೆ ಕೆಲ ಸಲಹೆಗಳು

* ಸಮಯಕ್ಕೆ ಸರಿಯಾಗಿ ತಿಂಡಿ-ಊಟ

* ನಿತ್ಯ 30-40 ನಿಮಿಷ ನಡಿಗೆ/ ವ್ಯಾಯಾಮ

* ಪ್ರತಿದಿನ 7-8 ಗಂಟೆ ನಿದ್ರೆ

* ಮನೆಯಲ್ಲೇ ತಯಾರಿಸುವ ಆಹಾರ ಸೇವನೆಗೆ ಆದ್ಯತೆ

* ಮದ್ಯ, ತಂಬಾಕು, ಡ್ರಗ್ಸ್ ಸೇವೆಯಿಂದ ದೂರ

* ಒಳ್ಳೆಯ ಕಂಪನಿಯ ಪ್ರೋಟಿನ್ ಪೌಡರ್ ಬಳಕೆ

* ರೋಗಬಾಧೆಗೆ ಒಳಗಾದವರು ನಿತ್ಯ 3-4 ಬಾರಿ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆ

* ದೇಹಕ್ಕೆ ಹೊಂದಿಕೊಳ್ಳುತ್ತಿದ್ದರೆ ಮಾತ್ರ ಮಧ್ಯಂತರ ಉಪವಾಸ

ಡಾ. ಸತ್ಯಜಿತ್ ಗೋಧಿ

ಎಂಬಿಬಿಎಸ್, ಎಂಎಸ್ (ಜನರಲ್ ಸರ್ಜರಿ), ಎಂ.ಸಿಎಚ್., ಎಂಆರ್​ಸಿಎಸ್ ಹಿರಿಯ ಕನ್ಸಲ್ಟೆಂಟ್ ಜನರಲ್, ಲ್ಯಾಪ್ರೋಸ್ಕೋಪಿಕ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಆಸ್ಟರ್ ಆರ್.ವಿ. ಆಸ್ಪತ್ರೆ, ಜೆ.ಪಿ.ನಗರ, ಬೆಂಗಳೂರು (ಮಲ್ಟಿ ಸ್ಪೆಷಾಲಿಟಿ)

ಮೊಬೈಲ್ ಸಂಖ್ಯೆ: 7795039944

ವಿಳಾಸ: ಸಿಎ 37, 24ನೇ ಮುಖ್ಯರಸ್ತೆ, ಐಟಿಐ ಬಡಾವಣೆ, 1ನೇ ಹಂತ, ಜೆ.ಪಿ.ನಗರ, ಬೆಂಗಳೂರು- 560 078

ವೆಬ್​ಸೈಟ್: https://search.app/2u8qzKediQmhuyz76

Email- customercare.asterrv@asterhospital.in