ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು : ಹಿಂದು ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬ, ಪೂಜೆ, ವ್ರತಗಳ ಹಿಂದೆ ಒಂದು ಹಿನ್ನೆಲೆ ಇರುತ್ತದೆ. ನವರಾತ್ರಿ ಅಥವಾ ದಸರಾ ಹಬ್ಬವೆಂದರೆ ಶಕ್ತಿ ಆರಾಧನೆಯ ಪರ್ವಕಾಲ. ಈ ವೇಳೆ ಹಲವರ ಮನೆಯಲ್ಲಿ ಬೊಂಬೆ ಕೂರಿಸುವ ಪದ್ಧತಿ ಇದ್ದು, ಇದು ದೇವತಾರಾಧನೆಯ ವಿಶಿಷ್ಟ ಪರಿಕಲ್ಪನೆ. ಜಗತ್ತನ್ನು ಕಾಡುತ್ತಿದ್ದ ರಾಕ್ಷಸರನ್ನು ಸಂಹರಿಸಲು ಆದಿಶಕ್ತಿಯು 9 ದಿನಗಳ ಕಾಲ ಹೋರಾಡುವ ಕತೆ ಎಲ್ಲರಿಗೂ ಗೊತ್ತಿದೆ. ಮಹಿಷಾಸುರನನ್ನು ಸಂಹರಿಸಲು ಚಾಮುಂಡೇಶ್ವರಿಗೆ ಎಲ್ಲ ದೇವತೆಗಳು ತಮ್ಮ ಆಯುಧಗಳನ್ನು ನೀಡಿ ತಮ್ಮ ಶಕ್ತಿಯನ್ನು ದೇವಿಗೆ ಧಾರೆ ಎರೆಯುತ್ತಾರೆ. ನಂತರ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿ ವಿಜಯವನ್ನು ಸಾಧಿಸುತ್ತಾಳೆ. ಈ ಸಂದರ್ಭದಲ್ಲಿ ದೇವಿಗೆ ಶಕ್ತಿ ಧಾರೆ ಎರೆದು ನಿತ್ತೇಜರಾಗಿದ್ದ ದೇವಾನು ದೇವತೆಗಳನ್ನು ಬೊಂಬೆಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಅವರಿಗೆ ಪೂಜೆ ಸಲ್ಲಿಸಬೇಕೆಂಬ ಹಿನ್ನೆಲೆಯಲ್ಲಿ ಬೊಂಬೆ ಕೂರಿಸುವ ಪದ್ಧತಿ ಚಾಲ್ತಿಗೆ ಬಂದಿದೆ. ಹಾಗೂ ದುಷ್ಟರ ಸಂಹಾರಕ್ಕೆ ತಮ್ಮ ಶಕ್ತಿ ಧಾರೆ ಎರೆದ ದೇವತೆಗಳಿಗೆ ಗೌರವ ಸಲ್ಲಿಸುವ ಉದ್ದೇಶವೂ ಕೂಡಾ ಈ ಬೊಂಬೆ ಪ್ರದರ್ಶನದ ಹಿಂದಿದೆ. ಇನ್ನು ಸಾಂಸ್ಕೃತಿಕವಾಗಿ ಬೊಂಬೆ ಪ್ರದರ್ಶನ ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಎತ್ತಿ ತೋರುತ್ತದೆ. ನಿತ್ಯ ಮಾಡುವ ಪೂಜೆಯಲ್ಲೂ ಕೂಡಾ ದೇವರ ಮೂರ್ತಿಗಳು ಒಂದರ್ಥದಲ್ಲಿ ಬೊಂಬೆ ಸ್ವರೂಪದಲ್ಲಿಯೇ ಇದ್ದು, ದಸರಾ ವೇಳೆಯಲ್ಲಿ ಮತ್ತಷ್ಟು ಆಕರ್ಷಕವಾದ ಸ್ವರೂಪದಲ್ಲಿ ದೇವರ ಬೊಂಬೆಗಳನ್ನು ಪೂಜಿಸುವುದು ಪುರಾತನ ಕಾಲದಿಂದ ಬಂದಿರುವ ಪದ್ಧತಿಯಾಗಿದೆ. ಬೊಂಬೆ ಕೂರಿಸುವುದು ಕುಲವೃದ್ಧಿಯ ಸಂಕೇತ ಎನ್ನಲಾಗುತ್ತದೆ. ಸಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ನವಪೀಳಿಗೆಗೆ ಮನವರಿಕೆ ಮಾಡಲು ಬೊಂಬೆ ಪ್ರತಿಷ್ಠಾಪನೆ ಪೂರಕವಾಗಿದೆ. ಐದು, ಹತ್ತು, ನೂರು ಹೀಗೆ ಅವರವರ ಅಭಿರುಚಿಗೆ ತಕ್ಕಷ್ಟು ಬೊಂಬೆಗಳನ್ನು ಕೂರಿಸುವವರಿದ್ದಾರೆ. ಕೇವಲ ಆಕರ್ಷಣೆ, ಆಸಕ್ತಿಗಾಗಿ ಬೊಂಬೆಗಳನ್ನು ಕೂರಿಸುವವರಿಗಿಂತ, ಪಾರಂಪರಿಕವಾಗಿ ಪದ್ದತಿ ಪ್ರಕಾರ ಬೊಂಬೆ ಕೂರಿಸುವ ಮನೆತನಗಳು ನಾಡಿನಲ್ಲಿ ಸಾಕಷ್ಟಿವೆ. ಹಾಗೆ ಕೂರಿಸುವ ಬೊಂಬೆಗಳಲ್ಲಿ ಪಟ್ಟದ ಬೊಂಬೆಗಳಿಗೆ ವಿಶೇಷ ಮಹತ್ವವಿರುತ್ತದೆ. ಪ್ರತಿವರ್ಷ ಬೊಂಬೆಗಳು ಬದಲಾದರೂ ಪಟ್ಟದ ಬೊಂಬೆಗಳು ಮಾತ್ರ ಬಹಳ ಕಾಲದಿಂದ ಹಾಗೆಯೇ ಇರುತ್ತವೆ. ಅವು ಆ ಎಲ್ಲ ಬೊಂಬೆಗಳಿಗೆ ಪ್ರಧಾನ ಸ್ಥಾನದಲ್ಲಿದ್ದು ಪೂಜೆ ಪಡೆದುಕೊಳ್ಳುತ್ತವೆ. ಮನೆಗೆ ಬರುವವರ ದೃಷ್ಟಿ ಬೊಂಬೆಗಳ ಮೇಲೆ ಹೋಗುವುದರಿಂದ ಆ ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಬೊಂಬೆಗಳ ಪ್ರದರ್ಶನದ ಹಿಂದಿದೆ.
ದೇವಿ ಆರಾಧನೆಯ ಜೊತೆಗೆ ನವರಾತ್ರಿಯಲ್ಲಿ ದೇವತೆಗಳ ಬೊಂಬೆ ಪ್ರದರ್ಶನಕ್ಕೆ ವಿಶೇಷ ಸ್ಥಾನವಿದೆ. ಪೌರಾಣಿಕ ಕತೆಯನ್ನು ಸಾರುವ ದಸರಾ ಬೊಂಬೆ ಪ್ರದರ್ಶನವು ಕೂಡಾ ದೇವತಾರಾಧನೆಯ ಒಂದು ಭಾಗ. ಹಿಂದು ಸಂಸ್ಕೃತಿಯಲ್ಲಿ ಹಲವಾರು ಪುರಾಣ, ಪುಣ್ಯಕತೆಗಳಿವೆ. ಅವುಗಳನ್ನು ಯುವ ಪೀಳಿಗೆಗೆ ತೋರಿಸುವುದಕ್ಕೆ ಬೊಂಬೆ ಪ್ರದರ್ಶನ ಮತ್ತು ಪೂಜೆ ಮಹತ್ವದ ಮಾಧ್ಯಮ. ಶ್ರೀನಿವಾಸ ಕಲ್ಯಾಣ, ಸಂಪೂರ್ಣ ರಾಮಾಯಣ, ಮಹಾಭಾರತ, ರಾಘವೇಂದ್ರ ವೈಭವ, ಶ್ರೀಗುರು ಚರಿತ್ರೆ, ಶ್ರೀಕೃಷ್ಣಲೀಲೆ, ಚಾಮುಂಡೇಶ್ವರಿ ಮಹಿಮೆ, ತಿರುಪತಿ ಬ್ರಹ್ಮೋತ್ಸವ, ಭಗವಂತನ ದಶಾವತಾರ, ಆದಿಶಕ್ತಿಯ ವಿವಿಧ ಅವತಾರ, ಲಕ್ಷ್ಮಿ ನರಸಿಂಹ ಲೀಲೆ, ಮಹಾತ್ಮರ ಚರಿತ್ರೆ ಹೀಗೆ ಪುರಾಣಗಳ ಕಥಾಪ್ರಸಂಗವನ್ನು ಬೊಂಬೆಗಳ ಮೂಲಕ ಅನಾವರಣ ಮಾಡುವುದರಿಂದ ಪೌರಾಣಿಕ ಕತೆಗಳು ತಲೆಮಾರಿನಿಂದ ತಲೆಮಾರಿಗೆ ಉಳಿಯಲು ಸಾಧ್ಯ.
ನವರಾತ್ರಿ ಆರಂಭವಾಗುವುದು ಆಶ್ವೀಜ ಮಾಸದ ಪ್ರತಿಪದೆಯಂದು. ಮಹಾಲಯ ಅಮಾವಾಸ್ಯೆಯ ಮರುದಿನದಿಂದಲೇ ಬೊಂಬೆ ಪ್ರದರ್ಶನ ಆರಂಭವಾಗುತ್ತದೆ. ಕೆಲವು ಮನೆಗಳಲ್ಲಿ ಪದ್ದತಿಯಂತೆ ಘಟಸ್ಥಾಪನೆಯೊಂದಿಗೆ ಕಲಶವನ್ನಿಟ್ಟು ಜೊತೆಗೆ ಬೊಂಬೆಗಳನ್ನು ಕೂರಿಸುತ್ತಾರೆ. ಹೀಗೆ ಕೂರಿಸುವವರು 10 ದಿನಗಳವರೆಗೆ ಬೊಂಬೆಗಳನ್ನು ಪೂಜಿಸುತ್ತಾರೆ. ಇನ್ನು ಬಹಳಷ್ಟು ಜನರು ಸಪ್ತಮಿಯ ನಂತರ ಬರುವ ಮೂಲ ನಕ್ಷತ್ರದಂದು ಶಾರದಾ ಪೂಜೆಯ ದಿವಸ ಬೊಂಬೆಯನ್ನು ಕೂರಿಸಿ ದಶಮಿಯವರೆಗೆ ಪೂಜೆ ಸಲ್ಲಿಸುತ್ತಾರೆ. ಸ್ನೇಹಿತರು, ಬಂಧುಗಳನ್ನು ಆಹ್ವಾನಿಸಿ ಬೊಂಬೆ ಪ್ರದರ್ಶನವನ್ನು ಮಾಡುತ್ತಾರೆ. ಈ ವೇಳೆ ಅವರವರ ಆಸಕ್ತಿಗನುಗುಣವಾಗಿ ಅತ್ಯಂತ ವಿಜೃಂಭಣೆಯಿಂದ ಅಲಂಕಾರವನ್ನು ಮಾಡುವುದು, ಬೊಂಬೆಗಳಿಗೆ ಮದುವೆ ಮಾಡುವುದು ಇನ್ನಿತರೆ ಆಕರ್ಷಣೆಯನ್ನು ಬೊಂಬೆ ಪ್ರದರ್ಶನದಲ್ಲಿ ಕಾಣಬಹುದು. " ನವಜನಾಂಗಕ್ಕೆ ಸಂಸ್ಕೃತಿಯನ್ನು ಪರಿಚಯಿಸಲು ದಸರಾ ಬೊಂಬೆ ಪ್ರದರ್ಶನ ಮತ್ತು ಪೂಜೆ ಪೂರಕವಾಗಿದೆ. ಬೊಂಬೆಗಳು ಸಾಮಾನ್ಯವಾಗಿ ಸಣ್ಣ ಮಕ್ಕಳಿಗೆ ಆಕರ್ಷಕವಾಗಿರುತ್ತವೆ. ಆ ಬೊಂಬೆಗಳ ಮೂಲಕ ಪುರಾಣದ ಕತೆಗಳನ್ನು ಹೇಳಿದರೆ ಆ ಮಕ್ಕಳಿಗೆ ಸದಾ ಅದು ನೆನಪಿನಲ್ಲಿ ಉಳಿಯುತ್ತದೆ. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು." -ಡಾ. ಮೇಕಲಾ, ವೈದ್ಯೆ ಹಾಗೂ ಸಂಸ್ಕೃತಿ ಚಿಂತಕರು" ಬೊಂಬೆ ಪ್ರದರ್ಶನ ಸಾಂಸ್ಕೃತಿಕ ಆಚರಣೆಯ ಹೆಗ್ಗುರುತು. ಎತ್ತೆತ್ತ ನೋಡಿದತ್ತತ್ತ ನೀನೇ ದೇವಾ ಎಂಬ ವಚನದಂತೆ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿ. ನಿತ್ಯ ನಾವು ಮಾಡುವ ಪೂಜೆಯೂ ಕೂಡಾ ದೇವರ ಬೊಂಬೆಗಳಿಗೆ. ದಸರಾದಲ್ಲಿ ಅದು ಮತ್ತಷ್ಟು ವರ್ಣರಂಜಿತವಾಗುತ್ತದೆ. ನಮ್ಮ ಮನೆಯಲ್ಲಿ ಕಳೆದ 20 ವರ್ಷದಿಂದ ಬೊಂಬೆ ಪ್ರದರ್ಶನ ಮಾಡುತ್ತಿದ್ದೇವೆ. - ಡಾ.ಚಿಕ್ಕಹೆಜ್ಜಾಜಿ ಮಹಾದೇವ, ಸಾಹಿತಿಗಳು