ಜಿಲ್ಲೆ

ಕದ್ದ ಚಿನ್ನಾಭರಣ ಒಂದೂವರೆ ತಿಂಗಳು ಇಟ್ಕೊಂಡು, ಮಾರಾಟಕ್ಕೆ ಬಂದು ಪೊಲೀಸರ ಬಲೆಗೆ ಬಿದ್ದ!

yankanna_sagar

ಬೆಂಗಳೂರು: ಕದ್ದ ಚಿನ್ನಾಭರಣವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳದ ಶ್ರೀನಿವಾಸ್ ಅಲಿಯಾಸ್ ಅಪ್ಪು (42) ಬಂಧಿತ. ಆರೋಪಿಯಿಂದ 300 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶ್ರೀನಿವಾಸ್ ಡಿ. 3ರಂದು ಎಂಇಎಸ್ ರಸ್ತೆಯ ಜ್ಯುವೆಲರಿ ಮಳಿಗೆ ಸಮೀಪ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಮುಖ್ಯಪೇದೆ ನರೇಶ್‌ಗೆ ಅನುಮಾನ ಬಂದಿದ್ದು, ಶ್ರೀನಿವಾಸ್‌ನನ್ನು ತಡೆದು ವಿಚಾರಿಸಿದ್ದರು. ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಆತನ ಜೇಬು ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿತ್ತು. ಕೂಡಲೇ ವಶಕ್ಕೆ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಒಂದೂವರೆ ತಿಂಗಳ ಹಿಂದೆ ಮಹಾಲಕ್ಷ್ಮಿ ಲೇಔಟ್‌ನ ಜೆ.ಸಿ.ನಗರದಲ್ಲಿನ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ. ಕೂಡಲೇ ಮಾರಿದರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ತನ್ನ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ. ಪ್ರಕರಣ ಮರೆತಿರುತ್ತಾರೆ ಎಂದು ಯೋಚಿಸಿ ಕದ್ದ ಚಿನ್ನಾಭರಣವನ್ನು ಮಾರಾಟಕ್ಕೆ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಗಾಂಜಾ ಸೇವನೆ, ಜೂಜಾಟ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸನಾಗಿದ್ದ. ಹಣಕ್ಕಾಗಿ ಈ ಹಿಂದೆ ಮನೆಗಳ್ಳತನ ಮಾಡಿ ಬಂಧಿತನಾಗಿ, ಜೈಲು ಪಾಲಾಗಿದ್ದ. ಐದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದು, ಹಳೇ ಚಾಳಿ ಮುಂದುವರಿಸಿದ್ದ. 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಗಿರವಿ ಅಂಗಡಿಗಳಲ್ಲಿ ಒತ್ತೆ ಇಟ್ಟಿದ್ದ ಕದ್ದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..