ಜಿಲ್ಲೆ

ನಾಳೆ ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ: ದೇಗುಲದಲ್ಲಿ ಭರದ ಸಿದ್ಧತೆ

arunakunigal

ದೊಡ್ಡಬಳ್ಳಾಪುರ: ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲದಲ್ಲಿ ನಾಳೆ(ಡಿ.28) ಬ್ರಹ್ಮರಥೋತ್ಸವ ನಡೆಯಲಿದೆ.

ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ನಡೆಸಲು ಧಾಮಿರ್ಕ ದತ್ತಿ ಇಲಾಖೆಯು ಭರದ ಸಿದ್ಧತೆ ಆರಂಭಿಸಿದೆ. ದೇಗುಲದ ಗರ್ಭಗುಡಿ ಸೇರಿ ಪ್ರಾಂಗಣ ಹಾಗೂ ಸುತ್ತಲಿನ ಕಟ್ಟಡವನ್ನು ಬಣ್ಣಗಳಿಂದ ಅಲಂಕರಿಸಲಾಗಿದೆ. ಗರುಡಸ್ತಂಭ ಹಾಗೂ ಮೆಟ್ಟಿಲುಗಳನ್ನು ಶುಭ್ರಗೊಳಿಸಲಾಗಿದೆ. ದೇವಾಲಯದ ಮುಂದಿನ ಸ್ಥಳದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ದೇವಸ್ಥಾನದ ಪ್ರವೇಶ ದ್ವಾರ, ಮುಂಭಾಗ ಸ್ವಾಮಿಯ ದೀಪಾಲಂಕಾರ ಪ್ರತಿಕೃತಿ ನಿಲ್ಲಿಸಲಾಗಿದೆ. ದೇವಾಲಯವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ.

5ನೇ ದಿನಕ್ಕೆ ಉತ್ಸವ: ಶನಿವಾರ ಧ್ವಜಾರೋಹಣ ಅಂಕುರಾರ್ಪಣ, ಪುಣ್ಯಾಹ ನೆರವೇರಿದೆ. ಅಂಕುರಾರ್ಪಣೆ ನಡೆದ ಐದನೇ ದಿನಕ್ಕೆ ಸ್ವಾಮಿಯ ರಥೋತ್ಸವ ಜರುಗಲಿದೆ ಎಂದು ಪ್ರಧಾನ ಅರ್ಚಕ ಸುಬ್ಬುಶಾಸ್ತ್ರಿ ವಿವರಿಸಿದ್ದಾರೆ. ಬುಧವಾರ ಬೆಳಗಿನ ಜಾವ 2.30ಕ್ಕೆ ಸ್ವಾಮಿಗೆ ಅಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಗಂಧದ ಅಭಿಷೇಕ, ಪುಷ್ಪಾಭಿಷೇಕ, ವಿಭೂತಿ ಹಾಗೂ ರುದ್ರಾಭಿಷೇಕ ನೆರವೇರಲಿದೆ. ನಂತರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದರು.

ಶುಭ ಮೀನಲಗ್ನದಲ್ಲಿ ರಥೋತ್ಸವ: ಅಂದು ಬೆಳಗಿನ ಜಾವ 4.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. 4.45ಕ್ಕೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬಳಿಕ ದೇವಾಲಯದ ವತಿಯಿಂದ ವ್ರತಾಂಗ ಹೋಮ ಜರುಗಲಿದೆ. ಬೆಳಗ್ಗೆ 11.50 ರಿಂದ 12ರ ಒಳಗೆ ಸಲ್ಲುವ ಶುಭ ಮೀನಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.