ಜಿಲ್ಲೆ

ವ್ಯವಸ್ಥಿತ ಕಸ ಸಂಗ್ರಹಕ್ಕೆ ಕ್ಯೂಆರ್ ಕೋಡ್ : ರಾಜಧಾನಿಯಲ್ಲಿ ಹೊಸ ಪ್ರಯೋಗ

satishvml

ಬೆಂಗಳೂರು : ಮಹಾನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆಗೂ ಕ್ಯೂಆರ್ ಕೋಡ್ (ತ್ವರಿತ ಸ್ಪಂದನ ಸಂಕೇತ) ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಕೆಲವು ವಾರ್ಡ್‌ಗಳಲ್ಲಿ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ.

ನಗರದಲ್ಲಿ ಪ್ರತಿನಿತ್ಯ 4,500 ಟನ್‌ಗೂ ಅಧಿಕ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಆದರೆ, ತ್ಯಾಜ್ಯ ಸಂಗ್ರಹದ ವೇಳೆ ಆಟೋ ಟಿಪ್ಪರ್‌ಗಳು ಪ್ರತಿ ಮನೆಗೆ ಹೋಗದಿರುವ ಕಾರಣ ಜನ ಎಲ್ಲೆಂದರಲ್ಲಿ ಕಸ ಎಸೆದು ಬ್ಲಾಕ್ ಸ್ಪಾಟ್ ನಿರ್ಮಾಣ ಮಾಡುತ್ತಾರೆ. ಅದನ್ನು ತಪ್ಪಿಸಲು ಮನೆ-ಮನೆಗೂ ತ್ಯಾಜ್ಯ ಸಂಗ್ರಹಣೆ ಮುಖ್ಯವಾಗಿದೆ. ಆದ್ದರಿಂದ ಆಟೋ ಟಿಪ್ಪರ್ ಮತ್ತು ಪೌರ ಕಾರ್ಮಿಕರು ಪ್ರತಿ ಮನೆಗೆ ಭೇಟಿ ನೀಡಿ ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಿ ಕಸ ಸಂಗ್ರಹಿಸಿಕೊಂಡು ಬರುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ತ್ವರಿತ ಸ್ಪಂದನ ಸಂಕೇತ ವ್ಯವಸ್ಥೆ:  ಈಗಾಗಲೇ ಹಣಕಾಸಿನ ವ್ಯವಹಾರದಲ್ಲಿ ಆನ್‌ಲೈನ್ ಪೇಮೆಂಟ್‌ಗೆ ಬಳಸುವ ತ್ವರಿತ ಸ್ಪಂದನ ಸಂಕೇತ ಮಾದರಿಯಲ್ಲಿ ಸಂಕೇತ ಸಿದ್ಧಪಡಿಸಲಾಗುತ್ತದೆ. ಪ್ರತಿಯೊಂದು ವಾರ್ಡ್‌ಗೂ ಬದಲಿ ಕೋಡ್ ರಚಿಸಿ ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೋಟೆಲ್, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್, ಮಳಿಗೆಗಳು ಹಾಗೂ ವಿವಿಧ ಉದ್ಯಮಗಳ ಕಾಂಪೌಂಡ್‌ಗಳಿಗೆ ತ್ವರಿತ ಸ್ಪಂದನ ಸಂಕೇತ ಅಂಟಿಸಲಾಗುತ್ತದೆ. ಕಸ ಸಂಗ್ರಹಿಸವ ಆಟೋ ಟಿಪ್ಪರ್‌ಗಳ ಪೌರ ಕಾರ್ಮಿಕರಿಗೆ ಸ್ಕಾೃನ್ ಮಾಡುವ ಯಂತ್ರ ನೀಡಲಾಗುತ್ತದೆ. ಅವರು ಸ್ಕಾೃನ್ ಮಾಡಿ ತ್ಯಾಜ್ಯ ಸಂಗ್ರಹಿಸ ಬೇಕಾಗುತ್ತದೆ.

ತ್ವರಿತ ಸ್ಪಂದನ ಸಂಕೇತ ಬಳಕೆಯ ಲಾಭಗಳು

* ತ್ಯಾಜ್ಯ ನೀಡುವ ಎಲ್ಲ ಮನೆಗಳನ್ನು ಗುರುತಿಸಬಹುದು

* ಕಸ ನೀಡದಿರುವ ಮನೆಗಳನ್ನು ಪತ್ತೆ ಮಾಡಬಹುದು

* ಆಟೋ ಟಿಪ್ಪರ್‌ಗಳು ಪ್ರತಿ ಬೀದಿಗೆ ಹೋಗುವಂತೆ ಮಾಡುವುದು

* ಆಟೋ ಟಿಪ್ಪರ್‌ಗಳು ತಪ್ಪು ಲೆಕ್ಕ ಕೊಡುವುದನ್ನು ತಪ್ಪಿಸಬಹುದು

* ಬ್ಲ್ಯಾಕ್ ಸ್ಪಾಟ್ ಸಂಖ್ಯೆ ಕಡಿಮೆಯಾಗಲಿದೆ

ಬಿಬಿಎಂಪಿ ಘನತ್ಯಾಜ್ಯ ಉಪನಿಯಮ-2020ರಲ್ಲಿ ಮನೆ-ಮನೆಗೆ ಕ್ಯೂಆರ್ ಕೋಡ್ ಅಳವಡಿಸುವ ಉಲ್ಲೇಖ ಮಾಡಲಾಗಿದೆ. ಈ ಪ್ರಕಾರ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಕಸ ಸಂಗ್ರಹಣೆ ಆಟೋ ಟಿಪ್ಪರ್‌ಗಳ ಮೇಲೆ ನಿಗಾ ವಹಿಸಲು ತ್ವರಿತ ಸ್ಪಂದನ ಸಂಕೇತ ಅಳವಡಿಕೆ ಮಾಡುತ್ತಿದೆ. ಮೊದಲು ಪ್ರಾಯೋಗಿಕವಾಗಿ ಒಂದು ವಾರ್ಡ್‌ನಲ್ಲಿ ಜಾರಿಗೊಳಿಸಲಾಗುತ್ತದೆ. ನಂತರ, ಸಾಧಕ-ಬಾಧಕ ತಿಳಿದುಕೊಂಡು ಎಲ್ಲ ವಾರ್ಡ್‌ಗಳಲ್ಲಿ ಜಾರಿಗೊಳಿಸಲಾಗುವುದು.

ಡಿ. ರಂದೀಪ್ ವಿಶೇಷ ಆಯುಕ್ತ (ಬಿಬಿಎಂಪಿ ಘನತ್ಯಾಜ್ಯ ವಿಭಾಗ)