ಬಂಟ್ವಾಳ: ನರಿಕೊಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ತ್ಯಾಜ್ಯ ಸಂಗ್ರಹ ವಾಹನದ ಚಾಲಕಿ ಹಾಗೂ ಸಹಾಯಕಿ ವೈಯಕ್ತಿಕ ಕಾರಣ ನೀಡಿ ತ್ಯಾಜ್ಯ ಸಂಗ್ರಹ ಕಾರ್ಯದಿಂದ ಹಿಂದೆ ಸರಿದ ಪರಿಣಾಮ, ಮೊದಲ ದಿನ ಸ್ವತಃ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಸಿಬ್ಬಂದಿ ನೆರವಿನೊಂದಿಗೆ ತ್ಯಾಜ್ಯ ಸಂಗ್ರಹ ಕಾರ್ಯ ಮಾಡಬೇಕಾಯಿತು.
ಬಹುತೇಕ ಗ್ರಾ.ಪಂ.ಗಳಲ್ಲಿ ತ್ಯಾಜ್ಯ ಸಂಗ್ರಹದ ಕಾರ್ಯವನ್ನು ಮಹಿಳಾ ಸಂಜೀವಿನಿ ಒಕ್ಕೂಟಗಳಿಂದ ನಿರ್ವಹಿಸಲಾಗುತ್ತಿದ್ದು, ಇದೇ ರೀತಿ ನರಿಕೊಂಬು ಗ್ರಾ.ಪಂ.ನಲ್ಲೂ ಸಂಜೀವಿನಿ ಒಕ್ಕೂಟಕ್ಕೆ ಜವಾಬ್ದಾರಿ ನೀಡಿ ಗ್ರಾ.ಪಂ. ಮೂಲಕವೇ ವಾಹನ ಚಾಲನಾ ಪರವಾನಗಿ ಸಹಿತ ಇಬ್ಬರು ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು. ಆದರೆ ಅವರು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. ಹೀಗಾಗಿ ತ್ಯಾಜ್ಯ ಸಂಗ್ರಹ ಕಾರ್ಯ ಆರಂಭಿಸುವುದು ಸಾಧ್ಯವಾಗಿರಲಿಲ್ಲ.
ನರಿಕೊಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯವನ್ನು ಆರಂಭಿಸುವಂತೆ ಕಳೆದ ಗ್ರಾಮಸಭೆಯಲ್ಲಿ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಮುಂದಿನ ಸಭೆಯೊಳಗೆ ತ್ಯಾಜ್ಯ ಸಂಗ್ರಹ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಮಾ. 10ರಂದು ಗ್ರಾಮಸಭೆ ನಡೆಯಲಿರುವುದರಿಂದ ಅದಕ್ಕೂ ಮೊದಲು ತ್ಯಾಜ್ಯ ಸಂಗ್ರಹ ಅನಿವಾರ್ಯವಾಗಿದ್ದು, ಹೀಗಾಗಿ ಗ್ರಾ.ಪಂ. ಅಧ್ಯಕ್ಷರೇ ತ್ಯಾಜ್ಯ ಸಂಗ್ರಹ ಆರಂಭಿಸಿದ್ದರು. ಸಭೆಯ ಬಳಿಕ ತ್ಯಾಜ್ಯ ಸಂಗ್ರಹಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ತ್ಯಾಜ್ಯ ಸಂಗ್ರಹ ಚಾಲನೆಯ ಸಂದರ್ಭ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ರವಿ ಅಂಚನ್, ಪಿಡಿಒ ಹರೀಶ್ ಮೊದಲಾದವರಿದ್ದರು.
ನಿರ್ಮಾಣವಾಗದ ಸ್ವಚ್ಛ ಸಂಕೀರ್ಣ
ಪ್ರತಿ ಗ್ರಾ.ಪಂ.ನಲ್ಲಿ ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿಗೆ ಸ್ವಚ್ಛ ಸಂಕೀರ್ಣ ಮಾಡಲಾಗಿದ್ದು, ನರಿಕೊಂಬು ಗ್ರಾ.ಪಂ.ನಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಇನ್ನೂ ನಿರ್ಮಾಣವಾಗಿಲ್ಲ. ಆದರೆ ಗ್ರಾ.ಪಂ. ವ್ಯಾಪ್ತಿಯ ಶಂಭೂರಿನಲ್ಲಿ ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳ ತ್ಯಾಜ್ಯ ಸಂಗ್ರಹದ ಎಂಆರ್‌ಎಫ್ ಘಟಕ ಇರುವುದರಿಂದ ಪ್ರಸ್ತುತ ನರಿಕೊಂಬಿನ ಒಣ ತ್ಯಾಜ್ಯ ನೇರವಾಗಿ ಎಂಆರ್‌ಎಫ್ ಘಟಕಕ್ಕೆ ಸಾಗಿಸಲು ಅವಕಾಶ ಸಿಕ್ಕಿದೆ.