ಜಿಲ್ಲೆ

ಕಾರಿನಲ್ಲಿ ಸಾಗಿಸುತ್ತಿದ್ದ 29.3 ಕೆಜಿ ಗಾಂಜಾ ವಶ : ಒಬ್ಬನ ಬಂಧನ, ಇಬ್ಬರು ಪರಾರಿ

ಸೌಮ್ಯ ಆರ್

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 29.3 ಕೆಜಿ ಗಾಂಜಾವನ್ನು ಬೇಕಲ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ. ಬೋವಿಕ್ಕಾನ ಪೊವ್ವಲ್ ನಿವಾಸಿ ಸುಲೈಮಾನ್ ಬಾಸಿತ್ ಬಂಧಿತ. ಗಾಂಜಾ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬೇಕಲ ಡಿವೈಎಸ್‌ಪಿ ವಿ.ವಿ.ಮನೋಜ್ ಮಾರ್ಗದರ್ಶನದಂತೆ, ಪೆರಿಯ ಸನಿಹ ಹೆದ್ದಾರಿಯಲ್ಲಿ ಇನ್‌ಸ್ಪೆಕ್ಟರ್ ಕೆ.ಸಿ.ಶೈನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ವಾಹನ ತಪಾಸಣೆ ಮಧ್ಯೆ ಆಗಮಿಸಿದ ಕಾರನ್ನು ತಪಾಸಣೆಗೊಳಪಡಿಸಿದಾಗ ಕಾರಿನ ಡಿಕ್ಕಿಯ ತಳಭಾಗದಲ್ಲಿ ಸಂಗ್ರಹಿಸಿಡಲಾಗಿದ್ದ ಗಾಂಜಾ ಪತ್ತೆಯಾಗಿತ್ತು. ಕಾರು ನಿಲ್ಲಿಸುತ್ತಿದ್ದಂತೆ ಅದರಲ್ಲಿದ್ದ ಇಬ್ಬರು ಪರಾರಿಯಾಗಿದ್ದರು.