ಗಂಗಾವತಿ: ಸರ್ಕಾರಿ ನಿರ್ವಹಣೆಯ ಶಾಲಾ ಕಾಲೇಜು ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗುತ್ತಿದ್ದು, ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿಗೆ ಗುಣಮಟ್ಟ ಶಿಕ್ಷಣದ ವಾತಾವರಣ ನಿರ್ಮಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಅಭಿವೃದ್ಧಿಗೆ ಬದ್ಧನಾಗಿದ್ದು, ಮೂಲ ಸೌಕರ್ಯ ಕಲ್ಪಿಸಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯ ಸಮರ್ಪಕ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಖಾಸಗಿ ಕಾಲೇಜು ಮೀರಿಸುವಂಥ ಕಲಿಕಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎ.ಕೆ.ಮಹೇಶಕುಮಾರ ಮಾತನಾಡಿ, ಹಲವು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕಿದ್ದು, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. 12 ತಿಂಗಳು ವೇತನ ದೊರೆಯುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಬೇಕು. 3 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಸ್ನಾತಕೋತ್ತರ ವಿಭಾಗ ಆರಂಭಿಸಬೇಕೆಂದರು.
ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಜೇಕಿನ್, ಪದಾಧಿಕಾರಿಗಳಾದ ಗುಂಡೂರು ಪವನ್ ಕುಮಾರ, ಶಾಹೀನ್ ಕೌಸರ್, ಹುಲಿಗೆಮ್ಮ, ಪರ್ವೀನ್ ಸುಲ್ತಾನ್, ಡಾ.ಬಸವರಾಜ್ ಗೌಡನಭಾವಿ, ನಟರಾಜ ನಾಯಕ, ಡಾ.ಮಂಜಣ್ಣ ಪೂಜಾರಿ, ಪಂಚಾಕ್ಷರಯ್ಯ ಸ್ವಾಮೀಜಿ, ಹುಸೇನ್‌ಭಾಷಾ, ಮಲ್ಲಯ್ಯ, ಗೋಪಾಲ್‌ಸಿಂಗ್ ಇತರರಿದ್ದರು.
ಶಾಸಕರ ನಿವಾಸದಲ್ಲಿ ಕಸಾಪ ಮತ್ತು ನೌಕರರ ಸಂಘದ ತಾಲೂಕು ಘಟಕದಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿಯನ್ನು ಸನ್ಮಾನಿಸಲಾಯಿತು. ಕಸಾಪ ಭವನಕ್ಕೆ ಬೇಕಿರುವ ಸೌಲಭ್ಯಗಳ ಬಗ್ಗೆ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾಹಿತಿ ನೀಡಿದರು. ಸನ್ಮಾನ ಸ್ವೀಕರಿಸಿದ ಶಾಸಕ ಗಾಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಸಾಪ ಭವನ ಅಭಿವೃದ್ಧಿಗೆ 90 ಲಕ್ಷ ರೂ.ಅನುದಾನ ಮತ್ತು ವೈಯಕ್ತಿಕವಾಗಿ ನೆರವು ನೀಡುತ್ತೇನೆ.
ಹಂಪಿ ಉತ್ಸವ ಮಾದರಿಯಲ್ಲಿ ಆನೆಗೊಂದಿ ಉತ್ಸವ ಅಚರಣೆಗೆ ಕ್ರಮ ಕೈಗೊಳ್ಳುತ್ತೇನೆ. ಕಸಾಪ ಸದಸ್ಯನಾಗಿ ಉದಯೋನ್ಮುಖ ಸಾಹಿತಿಗಳು, ಕಲಾವಿದರು ಮತ್ತು ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದರು. ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ಉಪನ್ಯಾಸಕ ಡಾ. ಜಾಜಿ ದೇವೇಂದ್ರಪ್ಪ, ಪದಾಧಿಕಾರಿಗಳಾದ ಲಿಂಗಾರೆಡ್ಡಿ ವೀ.ಆಲೂರ್, ಟಿ.ಆಂಜನೇಯ, ಚನ್ನಬಸವ ಜೇಕಿನ್, ಎಚ್.ಬಸವರಾಜ್, ಪಂಪಣ್ಣನಾಯಕ, ಸುರೇಶ ಕಲಾಪ್ರಿಯ, ವಿರೂಪಾಕ್ಷಪ್ಪ ಶಿರವಾರ, ಮಾರುತಿ ಐಲಿ ಇತರರಿದ್ದರು.