ಜಿಲ್ಲೆ

ಉಪ್ಪಿನಂಗಡಿಯಲ್ಲಿ ದೇಶಕ್ಕಾಗಿ ಗಂಗಾರತಿ : ನೇತ್ರಾವತಿ-ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಕಾರ್ಯಕ್ರಮ

ಸೌಮ್ಯ ಆರ್

ಉಪ್ಪಿನಂಗಡಿ: ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ, ಬಾಂಗ್ಲಾ ಸಹಿತ ದೇಶದ ಹೊರಗೆ-ಒಳಗೆ ವಿಜೃಂಭಿಸುತ್ತಿರುವ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ದೈವೀ ಶಕ್ತಿಗಳ ವಿರಾಟ ಸ್ವರೂಪ ಅನಾವರಣಗೊಳ್ಳಲಿ ಎಂದು ಪ್ರಾರ್ಥಿಸಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಆಶ್ರಯದಲ್ಲಿ ಸೋಮವಾರ ರಾತ್ರಿ ನೇತ್ರಾವತಿ, ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗಂಗಾ ಆರತಿ ನಡೆಸಲಾಯಿತು.

ಭಜನಾ ಮಂಡಳಿ ಅಧ್ಯಕ್ಷ ಶರತ್ ಕೋಟೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ನಂಬಿದ ದೇವರಲ್ಲಿ ಅಂತಃಕರಣಪೂರಕವಾಗಿ ಪ್ರಾರ್ಥನೆ ಸಲ್ಲಿಸಬೇಕು. ದುಷ್ಟಶಕ್ತಿಗಳನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವಲ್ಲಿ ದುರ್ಗಾ ಮಾತೆಯ ಕೃಪಾಕಟಾಕ್ಷ ಲಭಿಸಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. 21 ಹಣತೆ ಮೂಲಕ ಗಂಗಾ ಆರತಿ ನಡೆಸಲಾಯಿತು.

ನಿವೃತ್ತ ಯೋಧರಾದ ಯಶವಂತ ಹೆಗ್ಡೆ, ಚಂದ್ರಶೇಖರ್ ಗುಂಡೋಳೆ, ಯೋಧ ಗಣೇಶ್ ಹೆಗ್ಡೆ, ಭಜನಾ ಮಂಡಳಿ ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಕೆ.ಸುಧಾಕರ ಶೆಟ್ಟಿ, ದಯಾನಂದ, ಯಶೋಧರ ಆಚಾರ್ಯ, ಚಂದ್ರಹಾಸ ಹೆಗ್ಡೆ, ಕಿಶೋರ್ ಕುಮಾರ್, ಕಂಗ್ವೆ ವಿಶ್ವನಾಥ ಶೆಟ್ಟಿ, ಐ.ಪುಷ್ಪಾಕರ್ ನಾಯಕ್, ಕೈಲಾರ್ ರಾಜಗೋಪಾಲ ಭಟ್, ಶಕಿಲಾ ಕುಂದರ್, ಶಶಿಧರ್ ಗೌಡ, ಬಿಪಿನ್ ಜೆ, ಸುಜಯ ಶರತ್, ಐ.ಪುರುಷೋತ್ತಮ ನಾಯಕ್, ಐ.ಚಿದಾನಂದ ನಾಯಕ್, ಎನ್.ಗೋಪಾಲ ಹೆಗ್ಡೆ, ಸುಂದರ ಆದರ್ಶನಗರ, ಶಶಿಧರ್ ಶೆಟ್ಟಿ, ಶಿವಾನಂದ, ಜಯ ಪೂಜಾರಿ, ಅನೀಶ್ ಗಾಣಿಗ ಮೊದಲಾದವರು ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಜಕರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ರಿಷಿಕೇಶ್, ಸುಜಯ್ ಎಸ್.ಶೆಟ್ಟಿ, ಪ್ರಾಂಜಲ್ ಪಿ.ನಾಯಕ್, ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮನ್ವಿತ್ ಶೆಟ್ಟಿ, ಶಿಲ್ಪಕಲೆಯಲ್ಲಿ ಸಾಧನೆ ತೋರಿದ, ನೃತ್ಯ ಭಜನಾ ತಂಡ ರಚಿಸಿದ ವಿಜಯ ಶಿಲ್ಪಿ, ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕಿ ಮಂಜುಳ ಎಂ.ಬಿ., ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ ಸಾಕೇತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.