ಮಂಜೇಶ್ವರ: ಹಳೆಗನ್ನಡ, ನಡುಗನ್ನಡ ಕಾವ್ಯ ಸಾಹಿತ್ಯ ಲೋಕದ ಅಕ್ಷಯಪಾತ್ರೆ. ಎಲ್ಲ ಸಾಹಿತ್ಯಾಭಿಮಾನಿ, ಕಲಾಭಿಮಾನಿಗಳು ಅವುಗಳನ್ನು ಯಥೇಚ್ಛವಾಗಿ ಬಳಸಬೇಕು. ತನ್ಮೂಲಕ ಮುಂದಿನ ಪೀಳಿಗೆಗೆ ಶುದ್ಧ ರೂಪದಲ್ಲಿ ನೀಡಬೇಕು ಎಂದು ಕಾಸರಗೋಡಿನ ಶಿವಳ್ಳಿ ಬ್ರಾಹ್ಮಣ ಸಭಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚೇತನರಾಮ ನೂರಿತ್ತಾಯ ಪಜಿಂಗಾರು ಹೇಳಿದರು.
ಗಮಕ ಕಲಾ ಪರಿಷತ್ತು, ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡ ಘಟಕಗಳ ಆಶ್ರಯದಲ್ಲಿ ಶನಿವಾರ ಮೀಯಪದವಿನ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗಮಕ ಶ್ರಾವಣ ಸರಣಿ ಕಾರ್ಯಕ್ರಮಗಳ ಸಮಾರೋಪದಲ್ಲಿ ಮಾತನಾಡಿದರು.
ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಸಮಾರಂಭ ಉದ್ಘಾಟಿಸಿದರು. ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು ಮುಖ್ಯ ಅತಿಥಿಯಾಗಿದ್ದರು.
ವಿ.ಬಿ.ಕುಳಮರ್ವ ಮಾತನಾಡಿದರು. ಲಕ್ಷ್ಮೀಶ ಕವಿಯ ಜೈಮಿನಿ ಭಾರತದಿಂದ ಆಯ್ದ ಲವಕುಶರ ಜನನ ಎಂಬ ಕಾವ್ಯಭಾಗವನ್ನು ಗಮಕಿ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ವಾಚನ ಮಾಡಿದರು. ನಿವೃತ್ತ ಪ್ರಾಂಶುಪಾಲ ಯು.ಎಸ್.ವಿಶ್ವೇಶ್ವರ ಭಟ್ ವ್ಯಾಖ್ಯಾನಗೈದರು. ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ ರಾವ್ ಸ್ವಾಗತಿಸಿದರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ವಿ.ಬಿ.ಕುಳಮರ್ವ ವಿರಚಿತ ಭಾಮಿನಿ ಷಟ್ಪದಿಯ ಗಮಕ ಗೀತೆಯನ್ನು ಶಿಕ್ಷಕಿ ರಾಧಾಮಣಿ ಪ್ರಾರ್ಥನೆಯಾಗಿ ಹಾಡಿದರು. ಪುಷ್ಪರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.