ಕವಿತಾಳದ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿರುವ ಬಸ್. 
ಜಿಲ್ಲೆ

ಹಣಗಿಯಿಂದ ಲಿಂಗಸುಗೂರಿಗೆ ಜೀವದ ಹಂಗು ತೊರೆದು ಪ್ರಯಾಣ

ಪ್ರವೀಣ ಉದುಸಾ ದಲಬಂಜನ್

ಕವಿತಾಳ: ಕವಿತಾಳ ಸೇರಿದಂತೆ ವಟಗಲ್, ಅಮೀನಗಡ, ಪಾಮನಕಲ್ಲೂರು ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಸ್‌ಗಳಲ್ಲಿ ಲಿಂಗಸುಗೂರು ಕಾಲೇಜಿಗೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ.

ವಿದ್ಯಾಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳು

ಹಣಗಿ, ಬಸ್ಸಪೂರ, ತೋರಣದಿನ್ನಿ, ವಟಗಲ್, ಇರಕಲ್, ಯಕ್ಲಸಪೂರ, ಅಮೀನಗಡ, ಕಾಚಪೂರ, ನೆಲಕೋಳ, ಯತಗಲ್, ಪಾಮನಕಲ್ಲೂರು, ಆನಂದಗಲ್, ಹರ‌್ವಪೂರ, ತುಪ್ಪದೂರು, ಗೆಜ್ಜಲಗಟ್ಟಾ, ನಿಲೋಗಲ್‌ನಿಂದ ನೂರಾರು ವಿದ್ಯಾರ್ಥಿಗಳು ಲಿಂಗಸುಗೂರಿಗೆ ಪಿಯುಸಿಯಿಂದ ವಿವಿಧ ಪದವಿ ಶಿಕ್ಷಣಕ್ಕಾಗಿ ದಿನವೂ ಹೋಗುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಹೀಗಾಗಿ ತರಗತಿಗಳು ತಪ್ಪುತ್ತವೆ ಎನ್ನುವ ಉದ್ದೇಶದಿಂದ ರಾಯಚೂರಿನಿಂದ ಲಿಂಗಸುಗೂರಿಗೆ ಹೋಗುವ ಬಸ್‌ನಲ್ಲಿ ವಿದ್ಯಾರ್ಥಿಗಳು ದಿನವೂ ಕಾಲೇಜಿಗೆ ಹೋಗುತ್ತಾರೆ.

ಮುಂಜಾನೆ ಏಳರಿಂದ ಬಸ್ ದಾರಿಯನ್ನು ಕಾಯಬೇಕಿದೆ. ಮೊದಲಿಗೆ ರಾಯಚೂರು-ಕೊಲ್ಲಾಪುರ, ನಂತರ ರಾಯಚೂರು-ಬೆಳಗಾವಿ ಬಸ್‌ನಲ್ಲಿ ಲಿಂಗಸುಗೂರಿಗೆ ಹೋಗುತ್ತಾರೆ. ಹಣಗಿಯಿಂದ ಪ್ರಾರಂಭವಾಗುವ ಬಸ್‌ನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುವುದರಿಂದ ಕವಿತಾಳದ ವಿದ್ಯಾರ್ಥಿಗಳು ಬಸ್‌ನಲ್ಲಿ ಜಾಗವಿಲ್ಲದೆ ಅದರಲ್ಲೂ ಹೊಂದಿಕೊಂಡು ಹೋಗುತ್ತಾರೆ. ಕವಿತಾಳದಿಂದ ಹೋಗುವ ಬಸ್ ವಟಗಲ್, ಅಮೀನಗಡ ಮತ್ತು ಪಾಮನಕಲ್ಲೂರುಗೆ ಬರುವಷ್ಟರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಬಸ್‌ನ ಚಾಲಕ ವಾಹನದಲ್ಲಿ ಜಾಗವಿಲ್ಲದ ಕಾರಣ ನಿಲ್ಲಿಸದಂತೆ ಹೋಗುವ ಸನ್ನಿವೇಶಗಳು ಕಾಣಲಾಗುತ್ತಿದೆ.