ಗದಗ: ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದವನ ಉದ್ದೇಶ ಹಣ ಮಾಡುವುದೇ ಹೊರತು ಜನರ ಸೇವೆ ಮಾಡುವುದಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.
ನೂತನವಾಗಿ ಆಯ್ಕೆಯಾದ ಚಿಂಚಲಿ ಗ್ರಾಮ ಪಂಚಾಯತಿ 3ನೇ ವಾರ್ಡ್ ಸದಸ್ಯ ಮುತ್ತಪ್ಪ ಸಂದಕದ ಅಂದಾ ದರ್ಬಾರ್ ಆರಂಭವಾಗಿದೆ. ಫಲಿತಾಂಶ ಬಂದು ಒಂದು ವಾರವೂ ಕಳೆದಿಲ್ಲ. ಪಂಚಾಯಿತಿಯಲ್ಲಿ ಇನ್ನು ಅಧ್ಯಕ್ಷ-ಉಪಾಧ್ಯಕ್ಷರೇ ಆಯ್ಕೆಯಾಗಿಲ್ಲ. ಅಷ್ಟರಲ್ಲೇ ಮುತ್ತಪ್ಪ ಸಂದಕದ ತನ್ನ ದುರ್ಬುದ್ಧಿಯನ್ನು ತೋರಿದ್ದಾನೆ.
ಸಂದಕದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಂದಕದ ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆನ್ನಲಾಗಿದೆ. ಹಣ ಮಾತ್ರವಲ್ಲದೆ ಮದ್ಯದ ಹೊಳೆಯನ್ನು ಹರಿಸಿದ್ದಾನೆ. ಹೀಗಾಗಿ ಇಷ್ಟೊಂದು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಮನೆಯ ನಾಲ್ಕನೇಯ ಬಿಲ್ ಬಿಡುಗಡೆ ಮಾಡಲು ನನಗೆ ಲಂಚ ಕೊಡಬೇಕು ಎಂದು ಒತ್ತಾಯಿಸಿದ್ದಾನೆ. ಅಲ್ಲದೆ, ಹಣ ಕೊಡಲು ಆಗದಿದ್ದರೆ ಲೈಂಗಿಕವಾಗಿ ಸಹಕರಿಸಬೇಕೆಂದು ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವ ಆರೋಪ ಸಂದಕದ ವಿರುದ್ಧ ಕೇಳಿಬಂದಿದೆ.
ಗ್ರಾಮದ ಅಂಗನವಾಡಿ ಕಾರ್ಯಕರ್ತೆಗೆ ಸಂದಕದ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಇನ್ನು ಸಂದಕದ ಎರಡನೇ ಭಾರಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದಾನೆ. ಇತ್ತ ಸದಸ್ಯನ ಕಿರುಕುಳಕ್ಕೆ ಎರಡು ಮಕ್ಕಳ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಮುಳಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೀವ ಭಯದಿಂದಲೇ ಮಹಿಳೆ ಈವರೆಗೆ ದೂರು ದಾಖಲು ಮಾಡಿಲ್ಲ. (ದಿಗ್ವಿಜಯ ನ್ಯೂಸ್)