More

    ಸಂಚಾರ ಪೊಲೀಸರ ಕಿರಿಕಿರಿ: ದಂಡ ವಸೂಲಿ ಹೆಸರಲ್ಲಿ ಕಿರುಕುಳ, ಕಾನೂನು ಅರಿವಿನ ಕೊರತೆ

    ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡುವುದು ಸ್ವತಃ ಹಾಗೂ ಇತರೆ ವಾಹನ ಸವಾರರಿಗೂ ಒಳಿತು. ಆದರೆ ನಿಯಮಗಳ ಅನುಷ್ಠಾನಕ್ಕೆ ಸಂಚಾರ ಪೊಲೀಸರು ನಗರದಲ್ಲಿ ತಪಾಸಣೆ ನಡೆಸುತ್ತಿರುವುದು ಕೆಲವೊಮ್ಮೆ ವಿಪರೀತಕ್ಕೆ ಹೋಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

    ಒಂದೊಂದು ಕಡೆ ಎಂಟು-ಹತ್ತು ಪೊಲೀಸರು ದಂಡ ವಸೂಲಿ ಯಂತ್ರ ಹಿಡಿದು ನಿಂತಿರುತ್ತಾರೆ. ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರನನ್ನು ಮಾತ್ರ ಅಡ್ಡಗಟ್ಟಿ ವಾಹನ ದಾಖಲೆ, ಚಾಲನಾ ಪರವಾನಗಿ, ವಾಹನ ವಿಮೆ, ವಾಯುಮಾಲಿನ್ಯ ಪ್ರಮಾಣಪತ್ರ ಇನ್ನಿತರ ಸಂಬಂಧಪಟ್ಟ ದಾಖಲೆ ಕೇಳಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಹಿರಿಯ ಅಧಿಕಾರಿಗಳು ಅನೇಕ ಬಾರಿ ಹೇಳಿದ್ದಾರೆ. ಆದರೆ ಕೆಲ ಪೊಲೀಸರು ಸುಖಾಸುಮ್ಮನೆ ವಾಹನಗಳನ್ನು ತಡೆದು ದಾಖಲೆ ಕೇಳುತ್ತಿದ್ದಾರೆ. ಕೆಲ ಪೊಲೀಸರು ಸವಾರರನ್ನು ಗೌರವಯುತವಾಗಿ ಮಾತನಾಡಿಸದಿರುವುದು, ನೇರವಾಗಿ ಕೀ ತೆಗೆದುಕೊಳ್ಳುವಂತಹ ಕೆಲಸ ಮಾಡುತ್ತಾರೆ. ನಿಯಮ ಉಲ್ಲಂಘನೆಗೆ ದಂಡವಿದೆಯಾದರೂ ಕ್ರಿಮಿನಲ್ ಅಪರಾಧ ಅಲ್ಲ. ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ವಾಹನ ಸವಾರರು ಅಸಮಾಧಾನ ಹೊರಹಾಕುತ್ತಿದ್ದಾರೆ.

    ವಾಹನ ಚಾಲನಾ ಪರವಾನಗಿ ಹಾಗೂ ವಾಹನ ಸದೃಢತಾ ಪ್ರಮಾಣಪತ್ರ (ಎಫ್​ಸಿ) ಮಾನ್ಯತೆಯನ್ನು, ಕರೊನಾ ಕಾರಣಕ್ಕೆ ಸರ್ಕಾರ 2021ರ ಮಾರ್ಚ್ ಅಂತ್ಯದವರೆಗೆ ವಿಸ್ತರಿಸಿದೆ ಎಂಬುದು ಅನೇಕ ಪೊಲೀಸ್ ಸಿಬ್ಬಂದಿಗೆ ತಿಳಿದಿಲ್ಲ. ಈ ಬಗ್ಗೆ ಆದೇಶ ತೋರಿಸಿ ಎಂದು ಸವಾರರನ್ನೇ ಕೇಳಿದ ಸಂದರ್ಭಗಳಿವೆ. ಅವಧಿ ವಿಸ್ತರಣೆ ಬಗ್ಗೆ ಅರಿವಿಲ್ಲದ ಸವಾರರು ದಂಡ ಪಾವತಿಸುತ್ತಿದ್ದಾರೆ. ಸಂಚಾರ ದಟ್ಟಣೆ ನಿವಾರಣೆಗಿಂತಲೂ, ದಂಡ ವಸೂಲಿಗೇ ಹೆಚ್ಚು ಆಸಕ್ತಿಯನ್ನು ಪೊಲೀಸರು ತೋರಿಸುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗಳು ನಡೆದಿವೆ.

    ತುರ್ತು ಸಂಖ್ಯೆ 112 ಬಿಜಿ!

    ಈ ಬಗ್ಗೆ ದೂರು ನೀಡಲು ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 100 ಕ್ಕೆ ಕರೆ ಮಾಡಿದರೆ, ಅದು ಶಿವಮೊಗ್ಗ ನಗರಕ್ಕೆ ಸಂಪರ್ಕವಾಗುತ್ತದೆ. ತುರ್ತು ಸಂಖ್ಯೆ 112 ಕ್ಕೆ ಕರೆ ಮಾಡಿದರೆ ಕಾರ್ಯನಿರತವಾಗಿದೆ ಎಂದು ಮುದ್ರಿತ ಧ್ವನಿ ಕೇಳಿಬರುತ್ತದೆ. ಒಂದೊಮ್ಮೆ ಸಂಪರ್ಕ ಸಿಕ್ಕಲ್ಲಿ ಪೊಲೀಸ್, ಅಗ್ನಿಶಾಮಕ ಹಾಗೂ ವೈದ್ಯಕೀಯ ಸೇವೆಗೆ 8 ಒತ್ತಿ ಎಂದು ಕೇಳಿಬರುತ್ತದೆ. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಕರೆ ಕಡಿತವಾಗುತ್ತದೆ. ಉತ್ತಮ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳದೆ, ಜನಸಾಮಾನ್ಯರ ಸಮಸ್ಯೆ ಹೇಳಿಕೊಳ್ಳಲೂ ಕಷ್ಟವಾಗುತ್ತಿದೆ.

    ಟೈಗರ್ ವಾಹನಗಳಲ್ಲಿ ಅಂಧಾ ದರ್ಬಾರ್

    ಟೈಗರ್ ವಾಹನಗಳನ್ನು ಕಂಡರೆ ಜನರು ಭಯಬೀಳುವಂತಾಗಿದೆ. ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ರ್ಪಾಂಗ್ ಮಾಡಿದಲ್ಲಿ ಎತ್ತೊಯ್ಯಲು ನಿಗದಿತ ನಿಯಮ ಪಾಲಿಸಬೇಕು. ಟೈಗರ್ ವಾಹನ ಬಂದಾಗ ಮೈಕ್​ನಲ್ಲಿ ಘೋಷಣೆ ಮಾಡಿ ಮಾಲೀಕರನ್ನು ಎಚ್ಚರಿಸಬೇಕು. ಆಗಲೂ ವಾಹನವನ್ನು ತೆರವು ಮಾಡದಿದ್ದರೆ ಎಳೆದೊಯ್ಯಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರೇ ಹೇಳುತ್ತಾರೆ. ಆದರೆ, ಟೈಗರ್ ವಾಹನದಲ್ಲಿರುವ ಆರೇಳು ಜನರ ತಂಡ ಈ ನಿಯಮ ಪಾಲಿಸದೆ, ಕ್ಷಣಮಾತ್ರದಲ್ಲಿ ವಾಹನವನ್ನು ಅನಾಮತ್ತಾಗಿ ಎತ್ತಿ ಹಾಕಿಕೊಳ್ಳುತ್ತಾರೆ. ಆಗ ವಾಹನಗಳ ಹೊರಭಾಗ ಯದ್ವಾತದ್ವ ಜಖಂ ಆಗುತ್ತಿವೆ. ಬಹುತೇಕ ಫೈಬರ್ ಭಾಗಗಳೇ ಇರುವ ಕಾರಣ ಮುರಿಯುತ್ತಿವೆ. ದಂಡಕ್ಕಿಂತಲೂ ಹೆಚ್ಚು ಮೊತ್ತವನ್ನು ರಿಪೇರಿಗೇ ನೀಡಬೇಕು. ಈ ಕಾರ್ಯಕ್ಕೆ ವೃತ್ತಿಪರರ ನೇಮಕ ಮಾಡಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಜನರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts