ಹೊಸಪೇಟೆ: ಜಿ-20 ನಿಮಿತ್ತ ಹೊಸಪೇಟೆಯಿಂದ ಕಮಲಾಪುರದವರೆಗೆ ಅಭಿವೃದ್ಧಿಪಡಿಸಿದ್ದ ರಸ್ತೆಗಳ ಗುಣಮಟ್ಟ ಅಲ್ಪ ಮಳೆಗೆ ಬಯಲಾಗಿದೆ. ಅಲ್ಲಲ್ಲಿ ರಸ್ತೆಗಳು ಬಿರುಕು ಬಿಡುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿವೆ.
ವಿಶ್ವದ ಗಮನ ಸೆಳೆದಿರುವ ಜಿ-20 ಶೃಂಗದ ಅಧ್ಯಕ್ಷತೆ ವಹಿಸಿರುವ ಭಾರತ 3ನೇ ಸಾಂಸ್ಕೃತಿಕ ಮತ್ತು ಶೆರ್ಪಾ ಸಭೆಯನ್ನು ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜು.9 ರಿಂದ 16ರವರೆಗೆ ಹಮ್ಮಿಕೊಂಡಿತ್ತು.
ಈ ಸಭೆಗೆ 20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಸದಸ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಈ ಭಾಗದ ಜಿಲ್ಲಾಡಳಿತದಿಂದ ಭರ್ಜರಿಯಾಗಿ ರಸ್ತೆಗಳ ಡಾಂಬರೀಕರಣ ಮಾಡಲಾಗಿತ್ತು. ಅದರೊಂದಿಗೆ ರಸ್ತೆಗಳ ಅಂಚಿನಲ್ಲಿ ಮತ್ತು ಮಧ್ಯದಲ್ಲಿ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕುವ ಮೂಲಕ ಕಂಗೊಳಿಸುವಂತೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಜಿಟಿಜಿಟಿ ಮಳೆಗೆ ರಸ್ತೆಗಳ ಬಣ್ಣ ಬಯಲಾಗಿದೆ.
ಇದನ್ನೂ ಓದಿ: ವಿಜಯನಗರ ಬಡಾವಣೆಯಲ್ಲಿ ಹದಗೆಟ್ಟ ರಸ್ತೆ ಗೋಳು
ಹೊಸಪೇಟೆ- ಕಮಲಾಪುರ ಮಾರ್ಗವನ್ನು ಕಳೆದ ವರ್ಷವಷ್ಟೇ ದುರಸ್ತಿ ಮಾಡಲಾಗಿತ್ತು. ಆನಂತರ ಜಿ-20 ನಿಮಿತ್ತ ರಸ್ತೆಗ ಸುಮಾರು 2 ಇಂಚಿನಷ್ಟು ಮರು ಡಾಂಬರೀಕರಣ ಮಾಡಲಾಯಿತು. ಕಡು ಕಪ್ಪು ಬಣದಿಂದ ಕೂಡಿದ್ದ ಡಾಂಬರ್ ಎಷ್ಟೋ ಮಜಬೂತ್ ಆಗಿದೆ. ಕನಿಷ್ಠ ಮೂರ‌್ನಾಲ್ಕು ವರ್ಷ ಬಾಳಿಕೆ ಬರಲಿದೆ ಎನ್ನುವಂತಾಗಿತ್ತು. ಆದರೆ, ಹಂಪಿಯಲ್ಲಿ ಆಯೋಜಿಸಿದ್ದ ಜಿ-20 ಸಭೆ ಮುಕ್ತಾಯಗೊಂಡು 15 ದಿನ ಕಳೆಯುವಷ್ಟರಲ್ಲಿ ರಸ್ತೆಗಳು ಹಾಳಾಗಿವೆ.
ಅನಂತಶಯನಗುಡಿ, ಮಲಪನಗುಡಿ, ಗಾಳೆಮ್ಮನಗುಡಿ ಹಾಗೂ ಕಮಲಾಪುರದ ಮಧ್ಯೆ 10ಕ್ಕೂ ಹೆಚ್ಚು ಕಡೆ ಸಣ್ಣ-ಪುಟ್ಟ ತಗ್ಗುಗಳು ಬಿದ್ದಿವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಮಗಾರಿಯ ಗುಣಮಟ್ಟ ಪ್ರಶ್ನಿಸುವಂತಾಗಿದೆ ಎಂಬುದು ಸಾರ್ವಜನಿಕರ ಮಾತು. ಸುಸಜ್ಜಿತವಾಗಿ ಕಾಣುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವೇಗವಾಗಿ ಬರುವ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರುವಂತಾಗಿದೆ. ಕೂಡಲೇ ದುರಸ್ತಿಗೊಳಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
ಈ ಮಾರ್ಗದಲ್ಲಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಡಿವೈಡರ್‌ಗಳ ಮಧ್ಯೆ ಕೆಲವೆಡೆ ಜನರು ಮತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಡಿವೈಡರ್ ಅಂತ್ಯ ಮತ್ತು ಆರಂಭದಲ್ಲಿ ಯಾವುದೇ ಸೂಚಕ ಫಲಕಗಳನ್ನು ಅಳವಡಿಸಿಲ್ಲ. ಇದರಿಂದಾಗಿ ನಿತ್ಯ ಒಂದಿಲ್ಲೊಂದು ವಾಹನ ಡಿವೈಡರ್‌ಗಳಿಗೆ ಡಿಕ್ಕಿಹೊಡೆದು, ಅಪಘಾತಕ್ಕೀಡಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪ.
ಜಿ-20 ಅಂಗವಾಗಿ ಅಭಿವೃದ್ಧಿಗೊಳಿಸಿದ್ದ ಹೊಸಪೇಟೆ- ಕಮಲಾಪುರ ಮುಖ್ಯ ರಸ್ತೆ ಮಾತ್ರವಲ್ಲದೇ, ಹಂಪಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳೂ ಹಾಳಾಗಿವೆ. ಅನೇಕ ಯುವಕ- ಯುವತಿಯರು ಬೈಕ್‌ಗಳಲ್ಲಿ ಹಂಪಿ ಪ್ರವಾಸ ಕೈಗೊಳ್ಳುವುದರಿಂದ ಸ್ವಲ್ಪ ಯಾಮಾರಿದರೂ ಅಪಘಾತಕ್ಕೆ ಕಾರಣವಾಗುತ್ತಿದೆ. | ವಿರೂಪಾಕ್ಷಿ, ತಾಲೂಕು ಅಧ್ಯಕ್ಷ, ಮಾನವ ಹಕ್ಕುಗಳ ರಕ್ಷಣಾ ಸಮಿತಿ, ಹೊಸಪೇಟೆ