ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿತ್ತನೆ ಬೀಜಗಳಿಗೆ ಬೀಜೋಪಚಾರ ಮಾಡುವ ಕುರಿತು ವಿಜ್ಞಾನಿ ಡಾ.ಜಿ.ಎನ್.ಶ್ರೀವಾಣಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಿದರು. 
ಜಿಲ್ಲೆ

ಬೀಜೋಪಚಾರದಿಂದ ರೋಗ ನಿಯಂತ್ರಣ: ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಎನ್.ಶ್ರೀವಾಣಿ ಸಲಹೆ

ರಾಯಚೂರು: ಮುಂಗಾರು ಸಿದ್ಧತೆ ಆರಂಭವಾಗಿದ್ದು, ರೈತರು ಉತ್ತಮ ಬೀಜ ಆಯ್ಕೆಗೆ ಜತೆಗೆ ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮಾಡುವುದು ಅತ್ಯಂತ ಪ್ರಮುಖವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಎನ್.ಶ್ರೀವಾಣಿ ತಿಳಿಸಿದರು.

ಬೀಜ ಕೊಳೆಯುವಿಕೆ ಮತ್ತು ಸಸಿ ಒಣಗುವಿಕೆ ತಡೆಯಬಹುದಾಗಿದೆ

ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ರೈತರಿಗಾಗಿ ಹಮ್ಮಿಕೊಂಡಿದ್ದ ಬೀಜೋಪಚಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಬೀಜೋಪಚಾರ ಮಾಡುವ ವಿಧಾನವನ್ನು ತೋರಿಸಿ, ಬೀಜೋಪಚಾರದಿಂದ ಆಗುವ ಪ್ರಯೋಜನ ಕುರಿತು ಮಾಹಿತಿ ನೀಡಿದರು.
ಬೀಜೋಪಚಾರದಿಂದ ಬೆಳೆಗಳಿಗೆ ಬೀಜಗಳ ಮೂಲಕ ಹರಡುವ ರೋಗಗಳನ್ನು ನಿಯಂತ್ರಿಸಬಹುದಾಗಿದ್ದು, ಬೀಜ ಕೊಳೆಯುವಿಕೆ ಮತ್ತು ಸಸಿ ಒಣಗುವಿಕೆ ತಡೆಯಬಹುದಾಗಿದೆ. ಭತ್ತಕ್ಕೆ ಕಾಡುವ ಕಾಡಿಗೆ ರೋಗ, ಮೆಣಸಿನಕಾಯಿಗೆ ಕಾಡುವ ಸಸಿ ಕೊಳೆ ರೋಗ ತಡೆಯಬಹುದಾಗಿದೆ.


ಭತ್ತದ ಬಿತ್ತನೆ ಬೀಜಕ್ಕೆ ಶಿಲೀಂದ್ರ ನಾಶಕಗಳಾದ ಕಾರ್ಬನ್‌ಡೈಜಿಮ್ 50 ಡಬ್ಲುೃಪಿಯನ್ನು ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂನಂತೆ ಉಪಚಾರ ಮಾಡಬೇಕು. ಹತ್ತಿಯಲ್ಲಿ ರಸಹಿರುವ ಕೀಟಗಳ ನಿಯಂತ್ರಣಕ್ಕಾಗಿ ಪ್ರತಿ ಕೆಜಿ ಬೀಜಕ್ಕೆ 10 ಗ್ರಾಂ ಇಮಿಡಾಕ್ಲೋಪ್ರಿಡ್ ಅಥವಾ 5 ಗ್ರಾಂ ಥಯಾಮಿಥಾಕ್ಸಾಮ್ 70 ಡಬ್ಲುೃಎಸ್‌ದಿಂದ ಬೀಜೋಪಚಾರ ಮಾಡಬೇಕು.


ತೊಗರಿಗೆ ಬರುವ ನೆಟೆರೋಗ, ಸೊರಗು ರೋಗ ತಡೆಗೆ ಪ್ರತಿ ಕೆಜಿ ಬೀಜವನ್ನು 2 ಗ್ರಾಂ ಕ್ಯಾಪ್ಟನ್ 80 ಅಥವಾ ಥೈರಾನ್ 75 ಡಬ್ಲುೃಪಿನಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೀಜಗಳನ್ನು ರೋಗಾಣು ಹಾಗೂ ಕೀಟಗಳಿಂದ ರಕ್ಷಿಸಲು ಅನುಕೂಲವಾಗಲಿದೆ ಎಂದು ಡಾ.ಜಿ.ಎನ್.ಶ್ರೀವಾಣಿ ತಿಳಿಸಿದರು.ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಎನ್.ಭಟ್, ಡಾ.ಕೆ.ಜೆ.ಹೇಮಲತಾ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.