ಜಿಲ್ಲೆ

ಫ್ರೆಂಡ್​ಷಿಪ್​ ಡೇ: ಲಾಸ್ಟ್​ಬೆಂಚ್​ನಿಂದ ಎತ್ತಿ ಮುಂದೆ ತಂದ..

ರಕ್ತಸಂಬಂಧಕ್ಕೂ ಮಿಗಿಲಾದ ಸಂಬಂಧ ಸ್ನೇಹ. ಯಾವುದೋ ಒಂದು ಕ್ಷಣದಲ್ಲಿ ಬಂಧುಗಳಾರೂ ಹತ್ತಿರವಿರದಾಗ, ಸಹಾಯಹಸ್ತ ಚಾಚಿರುವ ನಿಮ್ಮ ಸ್ನೇಹಿತರ ಕುರಿತು ಮರೆಯಲಾಗದ ಘಟನೆಯನ್ನು ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು ಅದೇ ತಾನೆ ಧಾರವಾಡದಲ್ಲಿ ಬಿಎಸ್ಸಿ ಓದುತ್ತಿದ್ದೆ. ಪಿಯುಸಿಯವರೆಗೆ ಕಟ್ಟುನಿಟ್ಟಾದ ನಿಯಮಗಳು ಇದ್ದ ಕಾಲೇಜಿನಿಂದ ಇಲ್ಲಿ ಸ್ವಾತಂತ್ರ್ಯ ಸಿಕ್ಕು ಹಾದಿತಪ್ಪತೊಡಗಿದ್ದೆ. ಓದೋದು, ಕ್ಲಾಸ್​ಗೆ ಹೋಗೋದನ್ನೇ ಬಿಟ್ಟೆ. ಹೋದಾಗ ಲಾಸ್ಟ್ ಬೆಂಚ್, ಮನಸ್ಸು ಎಲ್ಲೋ ಹೀಗೆ... ಆಗ ಸಿಕ್ಕವನೇ ಅಭಿಷೇಕ್ ದೊಡ್ಡಮನಿ. ಅದ್ಹೇಗೋ ಆತ ಹತ್ತಿರವಾಗಿಬಿಟ್ಟ. ಕ್ಲಾಸ್, ಸ್ಟಡಿ ವಿಷಯದಲ್ಲಿ ತುಂಬಾ ಸ್ಟ್ರಿಕ್ಟು. ಅವನ ಜತೆಜತೆಗೆ ಕ್ಲಾಸಿಗೆ ಅಟೆಂಡ್ ಅಗೋದು ನಂಗೆ ಅನಿವಾರ್ಯವಾಯಿತು, ಬೇಡ ಬೇಡ ಎಂದರೂ ಆತನಿಂದಾಗಿಯೇ ಓದುವ ಹವ್ಯಾಸ ರೂಢಿಯಾಗಿಬಿಟ್ಟಿತ್ತು. ಇದು ನನ್ನ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು. ಕಾಲೇಜು, ಅಭ್ಯಾಸ ಎಂದರೆ ಅಸಡ್ಡೆ ಮಾಡುತ್ತಿದ್ದ ನನ್ನಂಥ ಹುಡುಗನ ಬಗ್ಗೆ ಅವನಿಗೆ ಬೇರೆಯವರು ಕಿವಿ ಊದಿದರೂ ಅದಕ್ಕೆ ಕಿವಿಗೊಡದೇ ನನ್ನನ್ನೇ ಪರಿವರ್ತನೆ ಮಾಡಿದ ಈ ಗೆಳೆಯ.

| ಮಲ್ಲಿಕಾರ್ಜುನ್ ತಿಗಡಿ ಬೆಳಗಾವಿ