ಸಾಂದರ್ಭಿಕ ಚಿತ್ರ 
ಜಿಲ್ಲೆ

ಗುಟ್ಕಾ ವಿಚಾರಕ್ಕೆ ಹೊಡೆದಾಡಿಕೊಂಡ ಗೆಳೆಯರು, ಒಬ್ಬನ ಸಾವಲ್ಲಿ ಕೊನೆಯಾದ ಜಗಳ!

ಹುಬ್ಬಳ್ಳಿ: ಗುಟ್ಕಾ ವಿಚಾರಕ್ಕಾಗಿ ಗೆಳೆಯರಿಬ್ಬರು ಹೊಡೆದಾಡಿಕೊಂಡಿದ್ದು, ಕೊನೆಗೆ ಸ್ನೇಹಿತನೊಬ್ಬನ ಸಾವಿನೊಂದಿಗೆ ಜಗಳ ಅಂತ್ಯ ಆಗುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಹುಬ್ಬಳ್ಳಿಯ ಆನಂದ ನಗರದ ಬಾರ್​ವೊಂದರಲ್ಲಿ ಈ ಗಲಾಟೆ ನಡೆದಿದ್ದು, ಗೆಳೆಯರಿಬ್ಬರ ಪೈಕಿ ಮೆಹಬೂಬ್ ಎಂಬಾತ ಸಾವಿಗೀಡಾಗಿದ್ದಾನೆ. ಸ್ನೇಹಿತರಾದ ಮೆಹಬೂಬ್ ಮತ್ತು ಮಹಮದ್ ಗೌಸ್ ಎಂಬವರು ಮದ್ಯ ಸೇವಿಸಲು ಜೊತೆಯಾಗಿ ಬಾರ್​ಗೆ ತೆರಳಿದ್ದರು.

ಅಲ್ಲಿ ಗುಟ್ಕಾ ವಿಚಾರಕ್ಕಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಅದು ಜಗಳಕ್ಕೆ ತಿರುಗಿ ವಿಕೋಪಕ್ಕೆ ತೆರಳಿದ್ದು, ಮೆಹಬೂಬ್​ ಕೊಲೆಗೀಡಾಗಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಕಿಮ್ಸ್​ಗೆ ರವಾನಿಸಿದ್ದಾರೆ.