ಜಿಲ್ಲೆ

ವರ ಕವಿ ದ.ರಾ.ಬೇಂದ್ರೆ ಜೀವನಾಧಾರಿತ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿದ ಯುವ ಜೋಡಿ!

ಧಾರವಾಡ: ಕನ್ನಡದ ವರಕವಿ ದ.ರಾ.ಬೇಂದ್ರೆಯವರ ಬದುಕನ್ನು ವಸ್ತುವಾಗಿರಿಸಿಕೊಂಡು ಮಾಡಲಾದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗಮನ ಸೆಳೆದಿದೆ.

ಧಾರವಾಡದ ಯುವಜೋಡಿ ದ.ರಾ.ಬೇಂದ್ರೆಯವರ ಕವಿತೆಗಳಿಂದ ಆಯ್ದ ಪ್ರಣಯದ ಸಾರವನ್ನು ತಂದು ಛಾಯಾಚಿತ್ರಗಳ ಮೂಲಕ ಉತ್ತರ ಕರ್ನಾಟಕದ ಜೀವನ ಶೈಲಿಯನ್ನು ತೋರಿಸಿದ್ದಾರೆ.

ಏಪ್ರಿಲ್ 23 ರಂದು ವಿವಾಹವಾಗುತ್ತಿರುವ ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿಗೆ ಬೇಂದ್ರೆ ಹಾಗೂ ಅವರ ಕವಿತೆಗಳನ್ನಿಟ್ಟುಕೊಂಡು ಫೋಟೋಶೂಟ್ ಮಾಡಲು ಅನೇಕ ಕಾರಣಗಳಿದೆ. ಚೇತನಾ ಧಾರವಾಡದ ಸಾಧಂಕೇರಿಯಲ್ಲಿರುವ ಬೇಂದ್ರೆಯವರ ಮನೆಯ ನೆರೆಯ ನಿವಾಸಿಯಾಗಿದ್ದಾರೆ. ಅವರ ಕುಟುಂಬವು ತಲೆಮಾರುಗಳಿಂದ ಬೇಂದ್ರೆಯವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದೆ. ಫೋಟೋ ಥೀಮ್ ಬೇಂದ್ರೆಯವರ ಕವಿತೆಗಳ ದಿನ ದಿನದ ಬಳಕೆಯನ್ನು ಪ್ರತಿನಿಧಿಸುತ್ತದೆ. ಅತ್ಯಂತ ವಿಶಿಷ್ಟ ಸಂಗತಿ ಎಂದರೆ ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಛತ್ರಿ ಮತ್ತು ಗ್ರಾಮೋಫೋನ್‌ಗಳನ್ನು ಚಿತ್ರೀಕರಣಕ್ಕಾಗಿ ಕುಟುಂಬದಿಂದ ಎರವಲು ಪಡೆಯಲಾಯಿತು. ಧಾರವಾಡದ ಛಾಯಾಗ್ರಾಹಕ ಹರ್ಷದ್ ಉದಯ್ ಕಾಮತ್ ಈ ಫೋಟೋಶೂಟ್ ಮಾಡಿದ್ದಾರೆ.

ಈ ತಂಡವು ಬೇಂದ್ರೆ ಅವರ ಪ್ರಸಿದ್ಧ ಕವಿತೆಗಳಾದ "ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು" ಸೇರಿದಂತೆ ಅನೇಕ ಕವಿತೆಗಳನ್ನು ಆಯ್ಕೆ ಮಾಡಿಕೊಂಡಿದೆ. "ನಾನು ಈ ಹಿಂದೆ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗಾಗಿ ಹಳ್ಳಿ ಆಧಾರಿತ ಥೀಮ್ ಅನ್ನು ಮಾಡಿದ್ದೆ. ಆದರೆ ಸಾಹಿತ್ಯ ಜಗತ್ತಿನ ವ್ಯಕ್ತಿಯನ್ನು ವಸ್ತುವಾಗಿಸಿಕೊಳ್ಳಲು ಯೋಜಿಸಿದ್ದು ಇದು ನನಗೂ ಹೊಸ ಸಂಗತಿಯಾಗಿದೆ. ಅಲ್ಲದೆ ಬೇಂದ್ರೆಯವರು ಸ್ವತಃ ಬಳಸಿದ್ದ ವಸ್ತುಗಳನ್ನು ನಮ್ಮ ಈ ಇವೆಂಟ್ ಗಾಗಿ ಬಳಸಲು ಅನುಮತಿಸಿದ್ದು ದೊಡ್ಡ ವಿಚಾರವಾಗಿದೆ ಎಂದು ಫೋಟೊಗ್ರಾಪರ್ ಕಾಮತ್ ಅವರು ಹೇಳಿದ್ದಾರೆ.

ಛಾಯಾಚಿತ್ರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಜೋಡಿ ಮತ್ತು ಅವರ ಕುಟುಂಬ ಫೋಟೋಗ್ರಫಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.