ಉಡುಪಿ: ಭಾರತೀಯ ಸೇನೆ ಸೇರಲು ಇಚ್ಛಿಸುವ ಯುವಕ/ ಯುವತಿಯರಿಗಾಗಿ ಆ.2ರಿಂದ 18ರವರೆಗೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಉಚಿತ ತರಬೇತಿ ಶಿಬಿರ ‘ಯೋದ್ಧ-2024’ ಆಯೋಜಿಸಲಾಗಿದೆ ಎಂದು ಶಿಬಿರ ಆಯೋಜಿಸಿರುವ ಟೀಮ್ ನೇಷನ್ ಸ್ಟ್ ಅಧ್ಯಕ್ಷ ಸೂರಜ್ ಕಿದಿಯೂರು ಮಾಹಿತಿ ನೀಡಿದರು.
ಆ.3ರಂದು ಬೆಳಗ್ಗೆ 9.30ಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಶಿಬಿರಾರ್ಥಿಗಳಿಗೆ ಊಟ ಮತ್ತ ವಸತಿ ವ್ಯವಸ್ಥೆ, ಸಂಪೂರ್ಣ ಆರೋಗ್ಯ ತಪಾಸಣೆ, ಯೋಗ, ದೈಹಿಕ ಶಿಕ್ಷಣ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನವನ್ನು ನುರಿತ ತರಬೇತುದಾರರು ನೀಡಲಿದ್ದಾರೆ. ಯಾವುದೇ ರೀತಿಯ ಶುಲ್ಕ ಪಡೆಯಲಾಗುತ್ತಿಲ್ಲ. ಹೆಸರು ನೋಂದಣಿಗೆ ಆ.2 ಕೊನೇ ದಿನ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಉಡುಪಿ ಜಿಲ್ಲೆಯಲ್ಲಿ ರಕ್ತದ ಕೊರತೆ ಇರುವುದರಿಂದ ನಮ್ಮ ಸಂಸ್ಥೆ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೇನೆಗೆ ಸೇರಲು ಇರುವ ಮಾನದಂಡ ಹಾಗೂ ಶಿಬಿರದ ಮಾಹಿತಿಗೆ 7353308181, 9535981582 ಸಂಪರ್ಕಿಸಬಹುದು ಎಂದು ತಿಳಿಸಿದರು. ಸಂಸ್ಥೆ ಉಪಾಧ್ಯಕ್ಷ ಡಾ.ಅತುಲ್ ಯು.ಆರ್., ಸದಸ್ಯ ಪಿ.ಬಿ.ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.