ಹೆಬ್ರಿ: ಕಾಲ ಕಾಲಕ್ಕೆ ಸರ್ಕಾರದಿಂದಾಗುವ ಕಾನೂನು ಬದಲಾವಣೆಗಳನ್ನು ಇಲಾಖೆಗಳ ಮುಖಾಂತರ ತಿಳಿದುಕೊಂಡು ದಾಖಲೆ ಸರಿಪಡಿಸಿಕೊಳ್ಳಬೇಕು. ಇದರಿಂದ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೆಬ್ರಿ ಪಿಡಿಒ ಸದಾಶಿವ ಸೆರ್ವೆಗಾರ್ ಹೇಳಿದರು.
ಹೆಬ್ರಿ ಬಡಾಗುಡ್ಡೆಯಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಸಂಯೋಜನೆಯಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಸಂಚಾರಿ ಗಿರಿಜನ ಆರೋಗ್ಯ ಪೆರ್ಡೂರು ಇವರ ಸಂಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಡಾ.ವಿದ್ಯಾ ಮಾಲಾರ್ಪಣೆ ಮಾಡಿದರು. ಕೊರ ಸಮುದಾಯದ ಮುಖಂಡ ಪುತ್ರನ್, ಹೆಬ್ರಿ ಪೊಲೀಸ್ ಠಾಣೆಯ ಎಎಸ್‌ಐ ದಯಾಕರ್ ಪ್ರಸಾದ್, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್, ಸಿಬ್ಬಂದಿ ಚಿದಾನಂದ, ಸಮುದಾಯದವರು ಉಪಸ್ಥಿತರಿದ್ದರು. ದಿವಾಕರ ಸ್ವಾಗತಿಸಿದರು. ಪುತ್ರನ್ ವಂದಿಸಿದರು.