ಉಳ್ಳಾಲ: ಸಂಸ್ಥೆಯ ಲಾಭದ ಒಂದಂಶವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಳಸಲಾಗುತ್ತಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ 800 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಗೌರವ ಸಲಹೆಗಾರ ಮುಸ್ತಫಾ ಹರೇಕಳ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಬಬ್ಬುಕಟ್ಟೆ ಖೈರಿಯಾ ಶೆಲ್ಟರ್ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖೈರಿಯಾ ಶೆಲ್ಟರ್‌ನ ಮನವಿಗೆ ಸ್ಪಂದಿಸಿ ಪುಸ್ತಕ ನೀಡಲಾಗಿದೆ. ಇಲ್ಲಿ ಪುಸ್ತಕ ಪಡೆದ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲರಾದಾಗ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ನೀಡುವ ಮೂಲಕ ಸಮಾಜ ಮತ್ತು ಸಮುದಾಯದ ಸ್ವತ್ತಾಗಬೇಕು ಎಂದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಜೆ.ಮೊಹಮ್ಮದ್ ಇಸಾಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್, ಬಬ್ಬುಕಟ್ಟೆ ಖೈರಿಯಾ ಶೆಲ್ಟರ್ ಮೆನೇಜರ್ ಮೊಹಮ್ಮದ್ ಕೊಲ್ಲರಕೋಡಿ, ಅಬ್ದುಲ್ ಖಾದರ್, ಶಾಂತರಾಜ್ ಮೊದಲಾದವರು ಉಪಸ್ಥಿತರಿದ್ದರು.