ಜಿಲ್ಲೆ

2017ರ ಕೆಪಿಎಸ್​ಸಿ ಪರೀಕ್ಷೆಯಲ್ಲೂ ಅಕ್ರಮ: ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಇಬ್ಬರು..

Webdesk - Ravikanth

ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಜಲಸಂಪ ನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತರರ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ಶಿವಮೊಗ್ಗದಲ್ಲಿ ಪರೀಕ್ಷಾರ್ಥಿಗಳಿಬ್ಬರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆ ಬರೆದಿರುವುದು ದೃಢಪಟ್ಟಿದೆ.

ಬಿ.ಎಂ.ಕೀರ್ತಿ ಮತ್ತು ಪ್ರಕಾಶ್ ಅಲಿಯಾಸ್ ಪ್ರಕಾಶ್ ನಾಯ್್ಕ ಎಲೆಕ್ಟ್ರಾನಿಕ್ ಡಿವೈಸ್​ಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಸಾಬೀತಾಗಿದೆ. 2017ರ ಸೆಪ್ಟೆಂಬರ್​ನಲ್ಲಿ ಕೆಪಿಎಸ್​ಸಿಯಿಂದ ಶಿವಮೊಗ್ಗದ ಬಿ.ಎಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲಾ ವಿಭಾಗ) ಪರೀಕ್ಷಾ ಕೇಂದ್ರ 10ರಲ್ಲಿ ಪರೀಕ್ಷೆ ಬರೆದಿದ್ದು ಹೈಕೋರ್ಟ್ ಆದೇಶದ ಮೇರೆಗೆ ಕೆಪಿಎಸ್​ಸಿ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಕೋಟೆ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

2017 ಅ.16ರಂದು ದಾವಣಗೆರೆ ಬಾಷಾನಗರದ ಎಸ್​ಕೆಎಎಚ್ ಪಿಯು ಕಾಲೇಜಿನಲ್ಲಿ ಮುರಾರ್ಜಿ ದೇಸಾಯಿ ಶಾಲೆಗಳ ಸಹ ಶಿಕ್ಷಕರ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದ್ದ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ಬಂದಿದ್ದು ಕಾಲೇಜಿಗೆ ಭೇಟಿ ನೀಡಿದಾಗ ಅಭ್ಯರ್ಥಿ ತಿಪ್ಪೇಶ್ ನಾಯ್್ಕ ಧರಿಸಿದ್ದ ಶರ್ಟ್​ನ ಒಳಭಾಗದಲ್ಲಿ ಮೊಬೈಲ್ ಮದರ್ ಬೋರ್ಡ್, ಸ್ಪೀಕರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಅದಕ್ಕೆ ಪ್ರದೀಪ್ ಮತ್ತು ಕೃಷ್ಣನಾಯ್್ಕ ಎಂಬುವರು ಸಹಕರಿಸಿದ್ದರು. ಈ ಬಗ್ಗೆ ದಾವಣಗೆರೆ ಆಜಾದ್​ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಜಲಸಂಪನ್ಮೂಲ ಇಲಾಖೆಯ ಹುದ್ದೆಗಳಿಗೆ ನಡೆದಿದ್ದ ಅಕ್ರಮದ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದರು.

ಏನಿದು ಪ್ರಕರಣ?: ಜಲ ಸಂಪನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತ ನೇಮಕಾತಿಗೆ ಪರೀಕ್ಷೆ ನಡೆಸಿತ್ತು. ದಾವಣಗೆರೆಯಲ್ಲಿ ಹನುಮಂತ ನಾಯ್್ಕ ಪಾಂಡುರಂಗ ನಾಯ್್ಕ ಬಸವರಾಜ ನಾಯ್್ಕ ಲೋಕೇಶ್ ನಾಯ್್ಕ ಮತ್ತು ಶಿವಮೊಗ್ಗದಲ್ಲಿ ಬಿ.ಎಂ.ಕೀರ್ತಿ, ಪ್ರಕಾಶ್ ನಾಯ್್ಕ ಡಿವೈಎಸ್ ಇರುವ ಬನಿಯಾನ್ ಹಾಕಿಕೊಂಡು ಪರೀಕ್ಷೆ ಬರೆದಿದ್ದರು. ನೇಮಕಾತಿಯ ಪ್ರಾವಿಜನಲ್ ಆಯ್ಕೆ ಪಟ್ಟಿಯಲ್ಲಿ ಆರೋಪಿಗಳ ಹೆಸರಿತ್ತು. 2018ರ ಡಿ.17ರಂದು ಆಯ್ಕೆಪಟ್ಟಿ ತಡೆ ಹಿಡಿಯಲು ವರದಿಯನ್ನು ಕೆಪಿಎಸ್​ಸಿಗೆ ತನಿಖಾಧಿಕಾರಿಗಳು ಸಲ್ಲಿಸಿದ್ದರು. ಈ ನಡುವೆ ಆರೋಪಿ ಗಳು ಪ್ರಕರಣ ಖುಲಾಸೆಗೊಳಿಸುವಂತೆ ಹೈಕೋರ್ಟ್​ಗೆ ರಿಟ್ ದಾವೆ ಸಲ್ಲಿಸಿದ್ದರು. ಆದರೆ ನ್ಯಾಯಾಲಯ 2021ರ ನ.23ರಂದು ದಾವೆಯನ್ನು ವಜಾಗೊಳಿಸಿ ಆರೋಪಿಗಳ ಮೇಲೆ ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.

ರುದ್ರಗೌಡ ಆಪ್ತರಿಬ್ಬರ ಸೆರೆ

ಕಲಬುರಗಿ: ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಗ್ಯಾಂಗ್​ನಲ್ಲಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ಡಿಎಆರ್ ಪೇದೆ ಇಸ್ಮಾಯಿಲ್ ಖಾದರ್ ಪರಾರಿಯಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ.

ಮಹೇಶ ಹಿರೊಳ್ಳಿ ಮತ್ತು ಸೈಫನ್​ಸಾಬ್ ಕರಜಗಿ ಬಂಧಿತರು. ಇದರೊಂದಿಗೆ ಬಂಧಿತರ ಸಂಖ್ಯೆ 41ಕ್ಕೆ ಏರಿದೆ. ಬಂಧಿತರಿಬ್ಬರು ಇಬ್ಬರು ರುದ್ರಗೌಡ ಆಪ್ತರು. ಪೊಲೀಸ್ ಇಲಾಖೆ ಡಿಎಆರ್​ನಲ್ಲಿ ಪೇದೆಯಾಗಿರುವ ಇಸ್ಮಾಯಿಲ್ ಖಾದರ್​ಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಆರ್.ಡಿ.ಪಾಟೀಲ್ ಜತೆ ಡೀಲ್ ಕುದುರಿಸಿದ್ದರು. ಬಂಧಿತ ಸೈಫನ್​ಸಾಬ್, ಇಸ್ಮಾಯಿಲ್ ಸಹೋದರ.

ಪಿಎಸ್​ಐ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಇಸ್ಮಾಯಿಲ್ ಪರೀಕ್ಷೆ ಬರೆದಿರುವುದು ಖಚಿತಪಟ್ಟ ಬೆನ್ನಲ್ಲೇ ಬಂಧನಕ್ಕೆ ಜಾಲ ಬೀಸಿದ್ದರೂ ಆತ ತಲೆಮರೆಸಿಕೊಂಡಿದ್ದಾನೆ. ಆತನ ಸಹೋದರನನ್ನು ಸಿಐಡಿ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮಹೇಶ ಹಿರೊಳ್ಳಿ, ಆರ್.ಡಿ.ಪಾಟೀಲ್ ಜತೆಗೂಡಿ ಹಣಕಾಸಿನ ವ್ಯವಹಾರಗಳ ಡೀಲ್ ಮಾಡುವುದು, ಡೀಲ್ ಕುದುರಿದ ಅಭ್ಯರ್ಥಿಗಳಿಗೆ ಬ್ಲೂಟೂತ್ ಸಲಕರಣೆ ತಲುಪಿಸುವ ಕೆಲಸ ಮಾಡುತ್ತಿದ್ದ. ಶುಕ್ರವಾರ ಸಂಜೆ ಇಬ್ಬರನ್ನು ಸಿಐಡಿಯವರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದರು. ಇದನ್ನು ಮನ್ನಿಸಿದ ನ್ಯಾಯಾಧೀಶರು ಒಂದು ವಾರ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದರು. ತನಿಖೆಯನ್ನು ಸಿಐಡಿ ಮತ್ತಷ್ಟು ಚುರುಕುಗೊಳಿಸಿದ್ದು, ಈ ಹಿಂದಿನ ನೇಮಕ ಪರೀಕ್ಷೆ ಅಕ್ರಮ ಕುರಿತು ಸಹ ತನಿಖೆ ಕೈಗೆತ್ತಿಕೊಳ್ಳಲು ಸಿಐಡಿ ತಯಾರಿ ನಡೆಸಿದೆ.