ಬೆಂಗಳೂರು: ಒಂಬತ್ತು ತಿಂಗಳ ಗಂಡುಮಗುವನ್ನು ಕೊಲೆ ಮಾಡಿ ಒಂದೇ ಕುಟುಂಬದ ನಾಲ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಪ್ರಕರಣಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ಸಾವಿನ ಮನೆಯಲ್ಲೂ 4 ದಿನಗಳ ಕಾಲ ಶವಗಳ ಮಧ್ಯೆ ಕಳೆದ ಎರಡೂವರೆ ವರ್ಷದ ಬಾಲಕಿ ಪವಾಡದ ರೀತಿಯಲ್ಲಿ ಬದುಕುಳಿದಿದ್ದಾಳೆ.
ಮಾಗಡಿ ರಸ್ತೆ ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ವಾಸವಾಗಿದ್ದ ‘ನಮ್ಮ ಶಾಸಕರ ವಾರ್ತೆ’ ವಾರ ಪತ್ರಿಕೆ ಸಂಪಾದಕ ಹಲ್ಲೆಗೇರೆ ಶಂಕರ್ ಅವರ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಶಂಕರ ಪತ್ನಿ ಭಾರತಿ (50), ಮಕ್ಕಳಾದ ಸಿಂಚನಾ (34), ಸಿಂಧುರಾಣಿ (31) ಮತ್ತು ಮಧುಸಾಗರ್ (27) ಹಾಗೂ ಸಿಂಚನಾ ಪುತ್ರ 9 ತಿಂಗಳ ಮಗು ಮೃತಪಟ್ಟವರು.
ತಾಯಿ ಮತ್ತು ಮೂವರು ಮಕ್ಕಳ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಡ್ ಮೇಲೆ 9 ತಿಂಗಳ ಮಗುವಿನ ಶವ ಪತ್ತೆಯಾಗಿವೆ. ಎಲ್ಲರ ಶವಗಳು ಕೊಳೆತ ಸ್ಥಿತಿಯಲ್ಲಿವೆ.
ಎರಡೂವರೆ ವರ್ಷದ ಪ್ರೇಕ್ಷಾ ಬದುಕುಳಿದ ಬಾಲಕಿ. ದೊಡ್ಡ ಮನೆಯಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಅಳು ಅಕ್ಕಪಕ್ಕದ ಮನೆಯವರಿಗೆ ಕೇಳಿಸಿಲ್ಲ.
ಮಂಡ್ಯ ಮೂಲದ ಹಲ್ಲೇಗೆರೆ ಶಂಕರ್ 30 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪತ್ನಿ ಮತ್ತು ಮಕ್ಕಳ ಜತೆ ತಿಗಳರಪಾಳ್ಯದ ಮನೆಯಲ್ಲಿ ನೆಲೆಸಿದ್ದರು. ನಾಲ್ಕೈದು ದಿನಗಳ ಹಿಂದೆ ಶಂಕರ್ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು. ಚೀಟಿಯಿಂದ ಬಂದ 10 ಲಕ್ಷ ರೂ. ವಿಚಾರಕ್ಕೆ ಜಗಳವಾಡಿಕೊಂಡು ಶಂಕರ್ ಮನೆಯಿಂದ ದೂರ ಉಳಿದಿದ್ದರು. ಕೌಟುಂಬಿಕ ಕಲಹದ ವಿಚಾರವಾಗಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗೊತ್ತಾಗಿದ್ದು ಹೀಗೆ..: ಶುಕ್ರವಾರ ಸಂಜೆ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳು ಅನುಮಾನ ಬಂದು ಶಂಕರ್‌ಗೆ ವಿಷಯ ಮುಟ್ಟಿಸಿದ್ದರು. ಸಂಜೆ 5 ಗಂಟೆಗೆ ಶಂಕರ್ ಮನೆ ಬಳಿಗೆ ಬಂದಾಗ ಲಾಕ್ ಆಗಿರುವುದು ಕಂಡು ಬಂದಿದೆ. ಕಿಟಕಿಯಲ್ಲಿ ನೋಡಿದಾಗ ಶವಗಳು ಕಾಣಿಸಿದ್ದು, ತಕ್ಷಣ ಶಂಕರ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. 4 ದಿನಗಳ ಹಿಂದೆ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮನೆಯಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊಟ, ನೀರಿಲ್ಲದೆ ಸಾವು?: ಅಜ್ಜಿ, ತಾಯಿ, ಚಿಕ್ಕಮ್ಮ ಮತ್ತು ಮಾವನ ಶವಗಳ ನಡುವೆ ಬೆಡ್ ಮೇಲೆ 9 ತಿಂಗಳ ಮಗುವಿನ ಶವ ಪತ್ತೆಯಾಗಿದೆ. ನಾಲ್ವರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗು ಮತ್ತು ಎರಡೂವರೆ ವರ್ಷದ ಪ್ರೇಕ್ಷಾಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. 4 ದಿನಗಳಿಂದ ಊಟ, ನೀರಿಲ್ಲದೆ ಮಗು ಮೃತಪಟ್ಟಿರುವ ಸಾಧ್ಯತೆ ಇದೆ. ಮಗುವನ್ನು ಕೊಂದು ಆನಂತರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜ್ಞೆ ಇಲ್ಲದೆ ಬಿದ್ದಿದ್ದ ಮಗು: ಐದು ಶವಗಳ ನಡುವೆ ಬಾಲಕಿ ಅತ್ತುಅತ್ತೂ ಪ್ರಜ್ಞೆ ತಪ್ಪಿತ್ತು. ಶವಗಳ ನಡುವೆಯೇ 4 ದಿನ ಕಳೆದಿದ್ದ ಹೆಣ್ಣು ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.