ಜಿಲ್ಲೆ

ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲೇ ಹೆಚ್ಚು ವಿದ್ಯಾರ್ಥಿಗಳ ಶಾಲೆ : ಸುಪ್ರಿಯಾ ಹರ್ಷೇಂದ್ರ ಕುಮಾರ್ ಶ್ಲಾಘನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸ್ವಾತಂತ್ರ್ಯ ಪೂರ್ವದಲ್ಲಿ ಮಲೆನಾಡು ಪ್ರದೇಶದಲ್ಲಿ ಶ್ರೀ ಜನಾರ್ದನ ಸ್ವಾಮಿ ಹೆಸರಿನಲ್ಲಿ ಪ್ರಾರಂಭಗೊಂಡ ಶಾಲೆ ಧರ್ಮಸ್ಥಳದ ಆಡಳಿತದಲ್ಲಿ ನವೀಕರಣಗೊಂಡು ಶತಮಾನೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಕಾಲಕಾಲಕ್ಕೆ ಶಾಲೆ ಆಧುನಿಕ ಸೌಲಭ್ಯಗಳನ್ನು ಹೊಂದಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಹಿರಿಮೆಗೆ ಪಾತ್ರವಾಗಿರುವುದು ಸ್ತುತ್ಯರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ ಹಾಗೂ ಶಾಲಾ ಶಿಕ್ಷಕ ರಕ್ಷಕ ಸಂಘ ಮಂಗಳವಾರ ಆಯೋಜಿಸಿದ್ದ ಶಾಲಾ ಸಂಸ್ಥಾಪನಾ ದಿನಾಚರಣೆ, ನೂತನ ಚಿಣ್ಣರ ಆಟದ ಮನೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಮಾತನಾಡಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಮೋಹನ ಶೆಟ್ಟಿಗಾರ್, ಸಂಚಾಲಕ ಕೆ.ಮೋಹನ್ ಕುಮಾರ್, ಕಾರ್ಯಕ್ರಮ ಸಂಯೋಜಕ ಸೋಮಶೇಖರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ, ಶಿಕ್ಷಣ ಸಂಸ್ಥೆಯ ಸಂಯೋಜಕ ಶಶಿಶೇಖರ ಕಾಕತ್ಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್, ರಮೇಶ್ ಪ್ರಭು, ಸಂಜೀವ ಶೆಟ್ಟಿ ಕುಂಟಿನಿ, ಶ್ರೀಧರ್ ಕೆ.ವಿ., ಮನಮೋಹನ್ ನಾಯಕ್, ಸವ್ಮಾನಿತರ ಪುತ್ರಿ ದೀಕ್ಷಾ ಮೊದಲಾದವರಿದ್ದರು. ಶಿಕ್ಷಕಿ ರೇವತಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಕೂಸಪ್ಪ ಗೌಡ ನಿರೂಪಿಸಿದರು. ಸೋಮಶೇಖರ ಶೆಟ್ಟಿ ವಂದಿಸಿದರು.

ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಶಾಲೆಯ ಸಂಸ್ಥಾಪಕ ಕೃಷ್ಣ ಪಡುವೆಟ್ನಾಯ ಮತ್ತು ಧರ್ಮಸ್ಥಳದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆಗೈಯ್ಯಲಾಯಿತು. ಶಾಲೆಯಲ್ಲಿ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕಿ ಶಾಂತಾ ಅವರನ್ನು ಗೌರವಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಈಶ್ವರ ದೇವಾಡಿಗರ ಅನಾರೋಗ್ಯದಿಂದ ಅವರನ್ನು ಮನೆಗೆ ತೆರಳಿ ಗೌರವಿಸಲಾಯಿತು.