Kundapra kannada habba : ಕುಂದಾಪ್ರ (ಕುಂದಾಪುರ) ಕನ್ನಡ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುವ ಮೂಲಕ 'ಕುಂದಾಪ್ರ ಕನ್ನಡ ಅಧ್ಯಯನ ಪೀಠ'ವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆಯಬೇಕು ಎಂದು ಮಾಜಿ ಸಂಸದ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರೂ ಆಗಿರುವ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.
ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಸಮೀಪದ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ "ಕುಂದಾಪ್ರ ಕನ್ನಡ ಹಬ್ಬ-2025" ಕಾರ್ಯಕ್ರಮದ ಮೊದಲ ದಿನವಾದ ಶನಿವಾರ 'ಕುಂದಾಪ್ರ ಕನ್ನಡ ಅಧ್ಯಯನ ಪೀಠ'ವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದಲ್ಲಿ ಈ ಅಧ್ಯಯನ ಪೀಠಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾತ್ರವಲ್ಲದೆ ಸರ್ಕಾರ ಕೂಡ ಒಪ್ಪಿಗೆ ನೀಡಿತು. ಬಳಿಕ ಸಿಎಂ ಆದ ಸಿದ್ದರಾಮಯ್ಯ ಅವರು ಈ ಪೀಠಕ್ಕೆ 1.5 ಕೋಟಿ ರೂ. ಮಂಜೂರು ಮಾಡಿದರು ಎಂದು ಹೆಗ್ಡೆ ತಿಳಿಸಿದರು.
ಕುಂದಾಪ್ರ ಕನ್ನಡ ಬಗ್ಗೆ ಹಳ್ಳಿಯ ಮಹಿಳೆಯರು ಹಾಗೂ ಹಿರಿಯರು ಮಾತನಾಡುತ್ತಿರುವ ಪದಗಳನ್ನು ಸಂಗ್ರಹಿಸಿ ಅಧ್ಯಯನ ಮುಂದುವರಿಸಿದರೆ ಪೀಠ ಇನ್ನಷ್ಟು ಬಲಗೊಳ್ಳುತ್ತದೆ. ಕುಂದಾಪ್ರ ಕನ್ನಡ ಬಗ್ಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಒಂದು ಆ್ಯಪ್ ಮಾಡಿದ್ದು, ಪಂಜು ಗಂಗೊಳ್ಳಿ ಅವರು ಕುಂದಗನ್ನಡ ನಿಘಂಟು ಮಾಡಿದ್ದಾರೆ. ಅದೇ ರೀತಿ ಕುಂದಾಪುರ ಕನ್ನಡ ಕುರಿತು ಯಾವುದೇ ಮಹತ್ವದ ವಸ್ತು/ವಿಷಯ ಇದ್ದರೆ ಪೀಠಕ್ಕೆ ನೀಡಿ ಎಂದ ಜಯಪ್ರಕಾಶ್ ಹೆಗ್ಡೆ, ಕುಂದಾಪುರದಲ್ಲೂ ಪೀಠದ ಉದ್ಘಾಟನೆ ಮಾಡಲಾಗುವುದು ಎಂದರು. ಅಲ್ಲದೆ ಹಿರಿಯರು ತಮ್ಮ ಮಕ್ಕಳು-ಮೊಮ್ಮಕ್ಕಳು ಕುಂದಾಪ್ರ ಕನ್ನಡ ಮಾತನಾಡುವಂತೆ, ಭಾಷೆಯ ಬಳಕೆ ಮುಂದುವರಿಯುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
'ಕುಂದಗನ್ನಡವನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಲು ಈ ಪೀಠ ನೆರವಾಗಲಿದೆ' ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕುಂದಾಪ್ರ ಕನ್ನಡ ಹಬ್ಬದಿಂದ ಕುಂದಾಪುರ ಮಾತ್ರವಲ್ಲದೆ ಬೆಂಗಳೂರು, ದುಬೈ ಸೇರಿ ವಿಶ್ವದೆಲ್ಲೆಡೆ ಕುಂದಾಪ್ರ ಹೆಸರು ಅನುರಣಿಸುತ್ತಿದೆ. ಬರೀ ಭಾಷೆ ಮೂಲಕವೇ ದೊಡ್ಡ ಸಂಘಟನೆ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಕುಂದಾಪುರ ಕನ್ನಡ ಹಬ್ಬ ಎಲ್ಲೆಡೆ ನಡೆಯುತ್ತಿದ್ದು, ಕುಂದಾಪುರದಲ್ಲಿ ಕುಂದಾಪುರ ಕನ್ನಡ ಭವನ ನಿರ್ಮಿಸುವ ಆಕಾಂಕ್ಷೆ ಇದೆ' ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.
ರವಿ ಬಸ್ರೂರು ರೂಪಿಸಿರುವ ಕುಂದಗನ್ನಡದ ಸುಮಾರು 9 ಸಾವಿರ ಪದಗಳನ್ನು ಒಳಗೊಂಡ 'ಡಿಜಿಟಲ್ ಶಬ್ದಕೋಶ' ಎಂಬ ಆ್ಯಪ್ ಕೂಡ ಈ ವೇಳೆ ಬಿಡುಗಡೆ ಮಾಡಲಾಯಿತು.
ಊರ ಗೌರವ ಪುರಸ್ಕಾರ: ಈ ಸಲದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಕುಂದಾಪುರ ಮೂಲದ ಸಾಧಕರಾದ ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಅವರಿಗೆ 'ಊರ ಗೌರವ' ಎಂಬ ವಿಶೇಷ ಪುರಸ್ಕಾರ ನೆರವೇರಿತು. "ಕುಂದಾಪುರವು ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಕುಂದಾಪುರ ಭಾಷೆ ಪ್ರೋತ್ಸಾಹಿಸಿ ಅಂದರೆ ಇನ್ನೊಂದು ಭಾಷೆಯನ್ನು ಕೀಳಾಗಿ ನೋಡಿ ಅಂತ ಅಲ್ಲ, ಬೇರೆ ಭಾಷೆಗಳ ಜೊತೆಗೆ ನಮ್ಮ ಭಾಷೆಗೆ ಹೆಚ್ಚು ಪ್ರೋತ್ಸಾಹ ನೀಡೋಣ" ಎಂದು ಡಾ.ಬಲ್ಲಾಳ್ ಹೇಳಿದರು.
ಕುಂದಾಪುರದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಕುಂದಾಪುರ ಕನ್ನಡ ಪ್ರತಿಷ್ಠಾನವು ಸರ್ಕಾರಕ್ಕೆ ಮನವಿ ಮಾಡಿಕೊಂಡಿತು. ತಾಲೂಕು ಕೇಂದ್ರ ಕುಂದಾಪುರದಲ್ಲಿ ಅತ್ಯಾಧುನಿಕ ಸುಸಜ್ಜಿತ ಕುಂದಾಪ್ರ ಕನ್ನಡ ಭವನ ನಿರ್ಮಾಣ, ಕುಂದಾಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಜೊತೆಗೆ ಬೆಂಗಳೂರಿನಲ್ಲಿರುವ ಕುಂದಾಪುರದ ಮೂಲದ ಹೋಟೆಲ್ ಮತ್ತಿತರ ಸಣ್ಣ ಉದ್ಯಮಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರವನ್ನು ಕೋರಲಾಯಿತು.
ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಭಾನುವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ʼಊರ ಗೌರವʼ ಎನ್ನುವ ವಿಶೇಷ ಪುರಸ್ಕಾರ ನೆರವೇರಲಿದೆ.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ರಾಜು ಮೊಗವೀರ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಎಂಆರ್‌ಜಿ ಗ್ರೂಪ್ ಸಿಎಂಡಿ ಪ್ರಕಾಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ರಕರ್ತ ಜೋಗಿ (ಗಿರೀಶ್ ರಾವ್), ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಪ್ರಮೋದ್ ಶೆಟ್ಟಿ, ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ ಉಪಸ್ಥಿತರಿರುವರು.
1. ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ಡಾ.ವಿದ್ಯಾಭೂಷಣರ ಗಾನಯಾನದ ಸುವರ್ಣ ಸಂಭ್ರಮ.
2. ಬಾಲಗೋಪಾಲ: ಮಕ್ಕಳ ಮಹಾಸಂಗಮದ ಯಕ್ಷನೃತ್ಯ
3. ಹಂದಾಡಿ ಕ್ವಿಜ್: ಮನು ಹಂದಾಡಿ ನಡೆಸಿಕೊಡುವ ಕುಂದಾಪ್ರ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ.
4. ಚಂದಾಮುಡಿ: ಕುಂದಾಪ್ರದ ಸುಂದರ-ಸುಂದರಿಯರ ಫ್ಯಾಷನ್ ಶೋ.
5. ಕಾಳಿಂಗ-ಕಾಳಿಂಗ: ಕಾಳಿಂಗ ನಾವಡ ಮತ್ತು ಪಿ.ಕಾಳಿಂಗರಾಯರ ಪದ-ಪದ್ಯಗಳ ಅನುರಣನ.
6. ರಘು ದೀಕ್ಷಿತ್ ಲೈವ್ ಕನ್ಸರ್ಟ್.
7. ವಿಶೇಷ ಅಭಿನಂದನೆ: ಕ್ಲೀನ್ ಕುಂದಾಪುರ, ಸೇವ್ ಅವರ್ ಓಷನ್.