ಬೆಂಗಳೂರು: ಪಿಎಸ್ಐ ನೇರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪ್ರತಿಭಾವಂತರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಅವಕಾಶ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೂ ಯಾರ ಮೇಲೂ ವೈಯಕ್ತಿಕವಾಗಿ ದೋಷಾರೋಪಣೆ ಮಾಡಿದ್ದಿಲ್ಲ. ಒಟ್ಟು ವ್ಯವಸ್ಥೆ ಸರಿಯಾಗಬೇಕೆಂದು ವಿಮರ್ಶಿಸಿದ್ದೆ. ಅದೊಂದು ರಚನಾತ್ಮಕ ಟೀಕೆಯಾಗಿದ್ದು, ಅದು ವೈರಲ್ ಆಗುವುದರಿಂದ ನನಗೆ ಯಾವುದೇ ಮುಜುಗರವಿಲ್ಲ ಎಂದು ಮಾಜಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷಕ್ಕೆ ಬುಧವಾರ ಸೇರ್ಪಡೆಯಾದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೇಶದಲ್ಲಿ ಇದು ಮೊದಕನೆಯದಲ್ಲ. 1980ರ ದಶಕದಲ್ಲಿ ಯುಪಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಮರು ಪರೀಕ್ಷೆ ನಡೆಸಲಾಗಿತ್ತು. ರಾಜ್ಯ ಸರ್ಕಾರ ಪಿಎಸ್ ಐ ನೇಮಕಕ್ಕೆ ಮರು ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದು, ಪ್ರತಿಭಾವಂತರಿಗೆ ಅವಕಾಶ ಲಭಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಜತೆಗೆ ಸದೃಢ ದೇಶ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಲು ಬಿಜೆಪಿ ಸೇರಿರುವೆ. ಯುವ ಜನರು ಹಾಗೂ ಮಹಿಳೆಯರಿಗೆ ಬಿಜೆಪಿ ಉತ್ತಮ ಅವಕಾಶ ನೀಡುತ್ತಿದೆ.
ವಿಆರ್ ಎಸ್ ತೆಗೆದುಕೊಂಡು ರಾಜಕೀಯ ಬದಲಾವಣೆಗೆ ಹೊರಟಿದ್ದೆ. ಆದರೆ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಪಕ್ಷಕ್ಕೆ ಸೇರ್ಪಡೆಯಾಗಿರುವೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ಭಾಸ್ಕರ್ ರಾವ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಬೇಷರತ್ ಸೇರ್ಪಡೆ
ಪಕ್ಷದ ಬಾವುಟ ನೀಡಿ ಭಾಸ್ಕರ್ ರಾವ್ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡ ನಂತರ ಪಕ್ಷದ ರಾಜ್ಯಾಧ್ಯಕ್ಷ ಮಾತನಾಡಿ, ಯಾವುದೇ ಆಸೆ-ಆಕಾಂಕ್ಷೆಯಿಲ್ಲದೆ. ರಾಜಕೀಯ ಕ್ಷೇತ್ರದ ಮೂಲಕ ದೇಶದ ಜನರ ಸೇವೆ ಸಲ್ಲಿಸಲು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಐಪಿಎಸ್ ಸೇವಾವಧಿಯಲ್ಲಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ, ಸಾಮಾನ್ಯ ಕಾರ್ಯಕರ್ತರಂತೆ ಸೇವೆ ಸಲ್ಲಿಸಲು ಬಂದಿರುವ ಭಾಸ್ಕರ್ ರಾವ್ ಮತ್ತವರ ಸಹವರ್ತಿಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಹೇಳಿದರು.