ಮುಕೇಶ್​ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಒದಗಿಸಲು ಸುಪ್ರೀಂಕೋರ್ಟ್​ ಆದೇಶ

Mukesh
Published on

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್​ ಇಂಡಸ್ಟ್ರೀಸ್​ನ ಚೇರ್ಮನ್​ ಮುಕೇಶ್​ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಅತ್ಯುನ್ನತ ಝಡ್​ ಪ್ಲಸ್​ (Z+) ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶಿಸಿದೆ.

ಭಾರತಾದ್ಯಂತ ಮತ್ತು ವಿದೇಶದಲ್ಲೂ ಅಂಬಾನಿ ಕುಟುಂಬಕ್ಕೆ ಭದ್ರತೆ ಒದಗಿಸಲು ಕೋರ್ಟ್​ ಸೂಚನೆ ನೀಡಿದೆ. ಸಂಪೂರ್ಣ ಭದ್ರತಾ ವೆಚ್ಚವನ್ನು ಅಂಬಾನಿ ಅವರೇ ಭರಿಸಬೇಕೆಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂದು ದ್ವಿಸದಸ್ಯ ಪೀಠವು ಸೋಮವಾರ ಈ ನಿರ್ದೇಶನವನ್ನು ಹೊರಡಿಸಿದೆ.

ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಅಂಬಾನಿ ಕುಟುಂಬದ ಭದ್ರತಾ ಜವಾಬ್ದಾರಿಯನ್ನು ಕೋರ್ಟ್​ ಹೊರಿಸಿದೆ. ಬೆದರಿಕೆ ಇದ್ದಲ್ಲಿ ತಮ್ಮದೇ ಖರ್ಚಿನಲ್ಲಿ ಭದ್ರತೆಯನ್ನು ಪಡೆಯಬಹುದು ಮತ್ತು ಉಳಿದುಕೊಳ್ಳುವ ಯಾವುದೇ ನಿರ್ಧಿಷ್ಟ ಸ್ಥಳದ ಮೇಲೆ ನಿರ್ಬಂಧ ಹೇರಲಾಗದು ಎಂದು ನ್ಯಾಯಾಲಯ ಹೇಳಿದೆ.

ಮುಕೇಶ್​ ಅಂಬಾನಿ ಪರ ಖ್ಯಾತ ನ್ಯಾಯವಾದಿ ಮುಕುಲ್​ ರೋಹಟಗಿ ಅವರು ವಕಾಲತು ವಹಿಸಿದರು. ಅಂಬಾನಿ ಕುಟುಂಬಕ್ಕೆ ನಿರಂತರ ಬೆದರಿಕೆಗಳು ಬರುತ್ತಿರುವುದನ್ನು ಮುಂಬೈ ಪೊಲೀಸರು, ಕೇಂದ್ರ ಗೃಹ ಸಚಿವಾಲಯ ಮೌಲ್ಯಮಾಪನ ಮಾಡಿದ್ದು, ಇದರ ಆಧಾರದ ಮೇಲೆ ನ್ಯಾಯಾಲಯ ಭದ್ರತೆ ಒದಗಿಸಲು ಸೂಚನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net