ಜಿಲ್ಲೆ

ದುಬೈ ಶೇಖ್​ ಲುಕ್​ನಲ್ಲಿ ಕಾಣಿಸಿಕೊಂಡರು ಮಾಜಿ ಸಿಎಂ ಸಿದ್ದರಾಮಯ್ಯ!

ಮಂಡ್ಯ: ರಾಜಕಾರಣಿಗಳು ತಮ್ಮ ಬೆಂಬಲಿಗರ, ಅನುಯಾಯಿಗಳ ಒತ್ತಾಯಕ್ಕೆ ಮಣಿದು ಆಯಾ ಪ್ರದೇಶ, ಸಂಪ್ರದಾಯಗಳಿಗೆ ತಕ್ಕಂತೆ ವೇಷಭೂಷಣಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಬಹುತೇಕ ಎಲ್ಲ ಪಕ್ಷಗಳ ನಾಯಕರೂ ಹೀಗೆ ಒಂದಲ್ಲ ಒಂದು ಸಲ ಕಾಣಿಸಿಕೊಂಡಿರುತ್ತಾರೆ. ಅಂಥದ್ದೇ ಒಂದು ಸಂದರ್ಭ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ.

ಪರಿಣಾಮವಾಗಿ, ಅವರು ಇಂದು ದುಬೈ ಶೇಖ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರೇನೂ ದುಬೈ ಪ್ರವಾಸಕ್ಕೆ ಹೋಗಿರಲಿಲ್ಲ. ಇದು ನಡೆದಿದ್ದು ರಾಜ್ಯದ ಮಂಡ್ಯದಲ್ಲೇ. ಇಂದು ಮಂಡ್ಯಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ದುಬೈ ಶೇಖ್​ ಲುಕ್​ನಲ್ಲಿ ಕಂಗೊಳಿಸಿದ್ದಾರೆ.

ಮಂಡ್ಯ ನಗರದ ಗುತ್ತಲಿನ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸಕ್ಕೆ ಅವರು ಇಂದು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಬೆಂಬಲಿಗರು ದುಬೈ ಶೇಖ್​ ಉಡುಪು ಕೊಡುಗೆಯಾಗಿ ನೀಡಿದ್ದಷ್ಟೇ ಅಲ್ಲದೆ, ಅದನ್ನು ಸಿದ್ದರಾಮಯ್ಯ ಅವರಿಗೆ ತೊಡಿಸಿ ಕಣ್ತುಂಬಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಅದನ್ನು ತೊಟ್ಟು ಖುಷಿಪಟ್ಟಿದ್ದಾರೆ.