ಜಿಲ್ಲೆ

ಅರಣ್ಯ ನೀರು ಯೋಜನೆ ಕಾರ್ಯಕ್ರಮ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಅಂಗವಾಗಿ ಕಾಸರಗೋಡು ಪ್ರೆಸ್ ಕ್ಲಬ್, ಜಿಲ್ಲಾ ಅರಣ್ಯ ಇಲಾಖೆ ಸಹಕಾರದೊಂದಿಗೆ ಮುಳಿಯಾರು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯ ನಡೆಸಲಾಯಿತು. ಕೇರಳ ಅರಣ್ಯ ಇಲಾಖೆ ‘ಅರಣ್ಯ ನೀರು ಯೋಜನೆ’ ಅನ್ವಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ಅರಣ್ಯಾಧಿಕಾರಿ ಕೆ.ಅಶ್ರಫ್ ಮಾತನಾಡಿ, ಕಾಸರಗೋಡು ನಗರದಿಂದ 20 ಕಿ.ಮೀ. ದೂರದ ಬೋವಿಕ್ಕಾನ-ಇರಿಯಣ್ಣಿ-ಬೇಪು ರಸ್ತೆಯ ಅರಣ್ಯ ಪ್ರದೇಶ ಚೇಟ್ಟಂನಲ್ಲಿ ಪ್ರೆಸ್‌ಕ್ಲಬ್ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಜತೆಯಾಗಿ ಕಿರು ಅಣೆಕಟ್ಟು ನಿರ್ಮಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಹರಿದು ಪೋಲಾಗುತ್ತಿರುವ ನೀರನ್ನು ಕಲ್ಲು, ಮಣ್ಣು ಬಳಸಿ ತಡೆದು ನಿಲ್ಲಿಸಿ ವನ್ಯಪ್ರಾಣಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ ಎಂದರು.

ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಶಿಜು ಕಣ್ಣನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ನಾರಾಯಣ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪದ್ಮೇಶ್ ಕೆ.ವಿ., ಜತೆ ಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಕಾರ್ಯಕಾರಿ ಸಮಿತಿ ಸದಸ್ಯ ರಂಜಿತ್ ಮನ್ನಿಪ್ಪಾಡಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನೇತೃತ್ವ ನೀಡಿದರು. ಅರಣ್ಯ ನೀರು ಯೋಜನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಚೆಕ್ ಡ್ಯಾಂ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದರು.